Thursday, July 3, 2008

ಹಿಂದೊಮ್ಮೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದ್ದ ನನ್ನದೊಂದು ಕತೆ.

ನಿರುದ್ಯೋಗಪರ್ವ

ಅಂಗ್ರೇಜಿಯಲ್ಲಿ ಬಡಬಡಿಸುವುದೊಂದು ಬಿಟ್ಟು ಜಗನ್ನಾಥನಿಗೆ ಇನ್ಯಾವ ಮಹಾಜ್ಞಾನವೂ ಇಲ್ಲ. ಇಂಜನಿಯರಿಂಗ್ ಬರೋಬ್ಬರಿ ನಾಲ್ಕೂ ವರ್ಷ ನನ್ನದೇ ನಕಲು ಮಾಡಿ ಹಾಗೂ ಹೀಗೂ ಪಾರಾದವನು. ಕಾಲ್ಸೆಂಟರಿನಲ್ಲಿ ಈತನ ’ತಂತ್ರಜ್ಞಾನ’ದ ಅಗತ್ಯ ಇಲ್ಲದ ಕಾರಣ ಅಂಗ್ರೇಜಿಯೇ ಕಾಪಾಡುತ್ತಿದೆ.
ಭಾಷೆಗೂ ಜ್ಞಾನಕ್ಕೂ ಸಂಬಂಧವಿಲ್ಲವೆಂಬುದು ಹಳೆಸತ್ಯವೇ ಆಗಿದ್ದರೂ, ಜಾಗತೀಕರಣವೆಂಬುದು ಜ್ಞಾನಕ್ಕೂ (ಮಾಡುವ) ಕೆಲಸಕ್ಕೂ ಸಂಬಂಧವಿಲ್ಲವೆಂಬ ಹೊಸ ವಿಚಾರವನ್ನು ಹುಟ್ಟುಹಾಕಿದೆ. ಜಗ್ಗ ಅಪ್ಪನ ಒತ್ತಾಯಕ್ಕೆ ಇಂಜನಿಯರಿಂಗ್ ಸೇರಿದವನು. ರೊಕ್ಕಸ್ತ ಅಪ್ಪನ ಮಗ. ದುಬಾರಿ ಬಟ್ಟೆಗಳನ್ನು ಧರಿಸುತ್ತಾನೆ. ಸಾಕಷ್ಟು ಹುಡುಗಿಯರ ಪರಿಚಯವಿದೆ. ನನ್ನಂತಹ ಕುಗ್ರಾಮದ ಹಿನ್ನೆಲೆಯಿಂದ ಬಂದವನಿಗೆ ಅದೊಂದು ದೊಡ್ಡ ಸಂಗತಿಯೇ ಹೌದು. "ಇವಳೊಂದಿಗೆ ನಾನು ಎಲ್ಲವನ್ನೂ ಮುಗಿಸಿದ್ದೇನೆ" ಎನ್ನುತ್ತಾನೆ, ಹುಡುಗಿ ಆಚೆ ಸರಿದ ಮೇಲೆ. ರೈಲು ಬಿಡುತ್ತಿರುವುದು ಖಚಿತವಾಗಿದ್ದರೂ ನಿಜವಿರಬಹುದೇ ಎಂಬ ಆತಂಕ ಹುಟ್ಟಿಬಿಡುತ್ತದೆ. ಸುಳ್ಳಿರಲಿ ಎಂದೇ ಮನಸ್ಸು ಆಶಿಸುತ್ತದೆ. ಅಂದರೆ ಹುಡುಗಿಯರ ಬಗ್ಗೆ ವಿಪರೀತ ಕಾಳಜಿ ಎಂದರ್ಥವೇನಲ್ಲ. ಅದೊಂದು ಥರದ ಸಾತ್ವಿಕ ಕೊರಗು.
ನನಗೂ ಜಗ್ಗನಿಗೂ ಯಾವ ವಿಚಾರದಲ್ಲಿಯೂ ಸಾಮ್ಯತೆ ಇಲ್ಲ. ಈ ಸ್ನೇಹಕ್ಕೆ ಕಾರಣ ಕೇವಲ ಸುದೀರ್ಘ ನಕಲು ಇತಿಹಾಸ. ನನ್ನಂತಹ ಪುಳಿಚಾರು ಮನುಷ್ಯನನ್ನು ಯಾವ ಪುರುಷಾರ್ಥಕ್ಕಾಗಿ ದೋಸ್ತಿ ಮಾಡುತ್ತೀಯೆಂದು ಆತನ ಸ್ನೇಹಿತ ವರ್ಗ ಗೇಲಿ ಮಾಡುವುದು ನನಗೆ ತಿಳಿಯದ ವಿಚಾರವೇನಲ್ಲ. ಅವರ ತಕರಾರೆಂದರೆ ಕುಡಿಯಲು ಒಲ್ಲದ, ಸೇದಲೂ ಸಲ್ಲದ ನಾನೊಬ್ಬ ಪ್ರಯೋಜನಕ್ಕೆ ಬಾರದ ಹುಳು. ಜಗ್ಗ ನನಗೆ ಸಾಕಷ್ಟು ಸಲ ಬುದ್ಧಿವಾದ(?) ಹೇಳಿದ್ದಾನೆ. "matrimonial websites ಎಂದಾದರೂ ನೋಡಿದ್ದೀಯೇನು? ಹುಡುಗಿಯರೂ ತಮ್ಮ ಭಾವೀ ಪತಿಯ ಬಗ್ಗೆ, 'drinking and smoking occasionally okay' ಎಂದು ಬರೆದಿರುತ್ತಾರೆ. ಇನ್ನು ನಿಂದೇನು?" ಎನ್ನುತ್ತಾನೆ. ಆದರೆ ಹೇಳುತ್ತಿರುವ ಈತನಿಗೂ ಕೇಳುತ್ತಿರುವ ನನಗೂ ಖಚಿತವಾಗಿ ಗೊತ್ತು. ಕುಡಿಯುವವರಿಗೆ ಒಕೇಶನ್-ವೆಕೇಶನ್ಗಳ ಜರೂರತ್ತಿಲ್ಲವೆಂಬುದು. ಪಾಸಾದ್ದಕ್ಕೆ, ಫೇಲಾದ್ದಕ್ಕೆ, ಹುಡುಗಿ ಕೈತಪ್ಪಿದ್ದಕ್ಕೆ, ಕೆಲಸ ಸಿಕ್ಕಿದ್ದಕ್ಕೆ, ಬಾಸ್ ಬೈಗುಳ ತಿಂದಿದ್ದಕ್ಕೆ, ಯಾವುದೂ ಇಲ್ಲದಿದ್ದರೆ ಕೊಂಚ ಮೋಡವಾಗಿ ಮಳೆ ಹನಿದರೆ ........... ಹೀಗೆ ಒಕೇಶನ್ಗಳಿಗೆ ಬರಗಾಲವೇ? ಗೊಂದಲಕ್ಕೀಡಾಗುತ್ತೇನೆ. ಕುಡಿಯುವುದು ಪಾಪವೋ ಅಥವಾ ಕುಡಿಯದಿರುವುದು ಮೌಲ್ಯವೇ ಎಂಬ ಗಹನವಾದ ಚರ್ಚೆಯೇ ಮನಸ್ಸಿನಲ್ಲಿ ಏರ್ಪಡುತ್ತದೆ. ಅದೇನೆ ಇರಲಿ, ನನಗೆ ಅರ್ಥವಾಗದೇ ಇರುವುದು ಒಂದೇ, ಈ ಕುಡುಕ ಪ್ರಾಣಿಗಳು ಅದೆಷ್ಟು ಬೇಗ ಆತ್ಮೀಯರಾಗಿಬಿಡುತ್ತಾರೆ. ಮಧ್ಯಾನ್ನದ ಊಟಕ್ಕೆ ಸಾಲ ಕೇಳಿದರೆ, ಕೆಳತುಟಿ ಕೆಳಕ್ಕೆ ಮಡಚಿ ತಲೆ ಅಲ್ಲಾಡಿಸುವ ಮನುಷ್ಯರು ಸ್ವಂತ ದುಡ್ಡಿನಲ್ಲಿ ಸ್ನೇಹಿತನಿಗೆ ಹೊಟ್ಟೆ ತುಂಬಾ ಶರಾಬು ಕುಡಿಸಿ "ಜೊ ಮಜಾ ಹೈ ಪಿಲಾನೆ ಮೆ, ಓ ಪೀನೆ ಮೆ ನಹಿ’ ಎಂದು ಗಾಲಿಬ್ನನ್ನು ಉದುರಿಸಿ ಬಾತ್ರೂಮ್ ಕಡೆ ಓಡುತ್ತಾರೆ. ವಾಂತಿಗೂ ಉಚ್ಚೆಗೂ ನಾ ಮೊದಲು ತಾ ಮೊದಲು ಎಂಬ ಸ್ಪರ್ಧೆ ಅಲ್ಲಿ.
ಜಗ್ಗ ಕಾಲ್ಸೆಂಟರಿನಲ್ಲಿ ಕೆಲಸ ಮಾಡುವುದಾದರೆ ಹೇಗಾದರೂ ಸಂದರ್ಶನಕ್ಕೆ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾನೆ. ಇಂಜನಿಯರಿಂಗ್ ಓದಿ, ಒಳ್ಳೆಯ ಅಂಕವನ್ನು ಪಡೆದೂ ಇನ್ನೇನೊ ಮಾಡಲು ಮನಸ್ಸು ಒಪ್ಪುವುದಿಲ್ಲ. ಮನೆಯಿಂದ ವಿಪರೀತ ಒತ್ತಡ ಬರುತ್ತಿದೆ. ಯಾವುದೂ ಇಲ್ಲದಿದ್ದರೆ ಮನೆಗೆ ಬಂದುಬಿಡಲಿ, ಇಲ್ಲೇ ಒಂದು ಬೀಡಾ ಅಂಗಡಿಯಾದರೂ ಮಾಡಿಕೊಡುತ್ತೇನೆ ಎಂದು ಅಪ್ಪಯ್ಯ ಸುದ್ದಿ ಮುಟ್ಟಿಸಿಯಾಗಿದೆ. ಅಪ್ಪಯ್ಯನ ಕಷ್ಟ ಅರ್ಥಮಾಡಿಕೊಳ್ಳಬಲ್ಲೆ. ಪೌರೋಹಿತ್ಯವೂ ಅಷ್ಟೊಂದು ಆದಾಯ ತರುತ್ತಿಲ್ಲ. ಮೊದಲಿನ ಹಾಗೆ ದೂರದ ಊರುಗಳಿಗೆ ಒಡಾಡಲು ತ್ರಾಣವಿಲ್ಲ ಆತನಿಗೆ. ಇಳಿವಯಸ್ಸಿನಲ್ಲಿ ಗಂಟೆಗಟ್ಟಲೇ ಒಂದೆಡೆ ಕುಳಿತು ಪೂಜಾ ವಿಧಾನಗಳನ್ನು ಪೂರೈಸುವುದೂ ಆತನಿಂದ ಈಗೀಗ ಕಷ್ಟವಾಗುತ್ತಿದೆ. ಇತ್ತೀಚೆಗೆ ಪಕ್ಕದ ಊರುಗಳಲ್ಲಿ ಕೆಲವು ಮರಿಪುರೋಹಿತರುಗಳು ಉದಯವಾಗಿದ್ದಾರೆ. ಮದುವೆ, ಮುಂಜಿ, ಶ್ರಾದ್ಧಗಳನ್ನು ಅವರೇ ಹುಡಿಹಾರಿಸುತ್ತಿದ್ದಾರೆ. ನನ್ನದೇ ಸಹಪಾಠಿಗಳಾಗಿದ್ದವರು ಹೈಸ್ಕೂಲು ದಿನಗಳಲ್ಲಿ. ಕೆಲಸ ಪೌರೋಹಿತ್ಯವೇ ಆಗಿದ್ದರೂ ಇಂದಿನ ಹೈಟೆಕ್ ದಿನಗಳಿಗೆ ಅವರೂ ಸ್ಪಂದಿಸದೇ ಇಲ್ಲ. ದ್ವಿಚಕ್ರ ವಾಹನಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಇನ್ಸ್ಟಂಟ್ ಮಂತ್ರಗಳಿಂದ ಕಾರ್ಯಕ್ರಮ ಮುಗಿಸಿ, ದಕ್ಷಿಣೆ ಪಡೆದು, ಊಟ ಮುಗಿಸಿ ಅರ್ಧಗಂಟೆಯ ವಿಶ್ರಾಂತಿ ನಂತರ ಮನೆಗೆ ವಾಪಸ್! ಅಪ್ಪಯ್ಯನ ಪಾಂಗಿತವಾದ ಉದ್ದನೆಯ ಪೂಜಾಪ್ರಕ್ರಿಯೆಗಳು ಇತ್ತೀಚಿನ ಜನಕ್ಕೆ ಅಷ್ಟೊಂದು ಒಗ್ಗುತ್ತಿಲ್ಲ. ಜನಕ್ಕೆ ಅವಸರ. ಸೊಸೈಟಿಯ ಸಾಲ, ಎಮ್ಮೆ ಸಾಲ, ಅದೂ ಇದೂ ಚಿಲ್ಲರೆ ಕೈಗಡಗಳ ಮಧ್ಯೆ ನನ್ನನ್ನು ಓದಿಸುವುದರಲ್ಲಿ ಅಪ್ಪಯ್ಯ ಸಾಕಷ್ಟು ಹಣ್ಣಾಗಿದ್ದಾನೆ. ಸೊಸೈಟಿ ಸಕ್ರೆಟರಿಯ ಮುಂದೆ ಸಾಲಕಟ್ಟದ ಕಾರಣಕ್ಕೆ ಬೈಸಿಕೊಂಡು ನಿಂತ ಆತನ ಅಸಹಾಯಕ ಮುಖವನ್ನು ನೆನೆಸಿಕೊಂಡರೆ ಯಾವ ಕೆಲಸವಾದರೆ ಏನು ಆದಷ್ಟು ಬೇಗ ಒಂದು ಕೆಲಸ ಸಿಕ್ಕಿದರೆ ಸಾಕೆನ್ನಿಸಿಬಿಡುತ್ತದೆ. ಇಂಜನಿಯರಿಂಗ್ ಮುಗಿದು ಪೂರ್ತಿ ಎಂಟು ತಿಂಗಳುಗಳೇ ಕಳೆದುಬಿಟ್ಟಿವೆ.
ಬಾಲ್ಯಸ್ನೇಹಿತ ನಾಗರಾಜನ ಆಶ್ರಯವೊಂದು ಸಿಗದಿದ್ದರೆ ಇರಲೊಂದು ಸೂರೂ ಇರುತ್ತಿರಲಿಲ್ಲ. ‘ಕೆಲಸ ಸಿಕ್ಕುವವರೆಗೆ’ ಎಂಬ ಬಾಯಿ ಕರಾರಿನ ಮೇಲೆ ಸೇರಿಕೊಂಡ ಜೀವಿ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಆತನಿಗೆ. ಚಾಮರಾಜಪೇಟೆಯ ಒಳಗಲ್ಲಿಯೊಂದರ ಚಿಕ್ಕ ಕೋಣೆ ಇದು. ಪಕ್ಕದ ಕೋಣೆಗಳೂ ಇದೇ ತರಹ ಬೆಂಕಿಪೊಟ್ಟಣದ ಗಾತ್ರದವು. ಕೆಳಗಡೆ ಓನರತಿ ಸಾವಿತ್ರಮ್ಮನ ವಾಸಸ್ಥಾನ. ಈ ಕೋಣೆಗಳ ಬಾಡಿಗೆ ಬಿಟ್ಟರೆ ಬೇರೇನೂ ಆದಾಯವಿದ್ದಂತಿಲ್ಲ. ಕಂಪೌಂಡಿನ ಗೋಡೆಯಿಂದ ಬರೋಬ್ಬರಿ ಒಂದೇ ನರಮನುಷ್ಯನಿಗಾಗುವಷ್ಟಿರುವ ಅವಕಾಶದಲ್ಲಿ ರೂಮು ತಲುಪಿಕೊಳ್ಳುವುದೇ ಒಂದು ಸಾಹಸ. ಎದುರಿಗಿನ ಕಟ್ಟಡದ ಎತ್ತರದ ಗೋಡೆ ಈ ಕೋಣೆಗಳ ಗಾಳಿ, ಬೆಳಕನ್ನು ಕಬಳಿಸಿದೆ. ಬೆಳಿಗ್ಗೆ ಏಳಕ್ಕೆ ನಾಗರಾಜ ಹೊರಟರೆ ರಾತ್ರಿ ಒಂಭತ್ತರವರೆಗೆ ನಾನು ಒಬ್ಬಂಟಿ. ಪಕ್ಕದ ಕೋಣೆಗಳಲ್ಲಿ ಅರ್ಥವಾಗದ ಭಾಷೆ ಮಾತನಾಡುವ ಹುಡುಗರಿದ್ದಾರೆ. ಅಷ್ಟಾಗಿ ಪರಿಚಯವಿಲ್ಲ. ಎಲ್ಲೋ ಕೆಲಸ ಮಾಡುತ್ತಿರಬೇಕು ಅಥವಾ ಓದುತ್ತಿರಬಹುದು. ಬೆಳಿಗ್ಗೆ ಹೋದರೆ ರಾತ್ರಿಯೇ ವಾಪಸ್ಸಾಗುವುದು. ಉದ್ದುದ್ದ ಸೈಡ್ಲಾಕ್ ಬಿಟ್ಟಿದ್ದಾರೆ. ಬಂದ ತಕ್ಷಣ ವಿಪರೀತ ವಾಲ್ಯೂಮ್ನಲ್ಲಿ ರಾಕ್ ಸಂಗೀತ ಹಾಕಿಕೊಂಡು ತಾವೂ ಅರಚುತ್ತಾ ಬಳಲಿ ಬೆಂಡಾಗುತ್ತಾರೆ. ಅವರುಗಳ ಆರ್ಭಟದ ಮುಂದೆ ನನ್ನ ಸಣ್ಣ ಸ್ಪೀಕರಿನಲ್ಲಿ ಹಾಡುವ ಗುಲಾಮ್ ಅಲಿ ಗಂಟಲು ಸಾಲದೆ ಸುಮ್ಮನಾಗಬೇಕಾಗುತ್ತದೆ.
ಎಲ್ಲರೂ ಕೆಲಸಕ್ಕೆ ತೆರಳಿದ ಮೇಲೆ ಡೆಕ್ಕನ್ ಹೆರಾಲ್ಡ್, ಟೈಮ್ಸ್ ಕ್ಲಾಸಿಫೈಡ್ಸ್ ‘ಅಧ್ಯಯನ’ದ ನಂತರ ಇನ್ನೇನಿದೆ? ಖರ್ಚು ಮಾಡಲು ಹಣವಂತೂ ಇಲ್ಲ. ಯಾವುದಾದರೂ ಸಂದರ್ಶನಕ್ಕೆ ಕರೆ ಬಂದಿದ್ದರೆ ಅವತ್ತಿನ ಕಾಲಹರಣ ಅದಕ್ಕಾಯಿತು. ಅರೆಗತ್ತಲ ಕೋಣೆಯಲ್ಲಿ ಮಾಸಲು ಚಾಪೆಯ ಮೇಲೆ ಹೊರಳಾಟ ನನ್ನ ನಿತ್ಯದ ದಿನಚರಿ. ವಿಪರೀತ ಸೆಖೆಯಾದರೆ ಸೀಲಿಂಗ್ ಫ್ಯಾನಿನ ಸಶಬ್ಧ ಸೇವೆ. ನನಗಿಂತ ಕಡಿಮೆ ಅಂಕಗಳಿಸಿದ್ದ ನನ್ನ ಜೊತೆಯ ಹುಡುಗರೆಲ್ಲ ಕೆಲಸಕ್ಕೆ ತಗುಲಿಕೊಂಡಾಯಿತು. ನನ್ನ ಒಳ್ಳೆಯ ಅಂಕ ನನ್ನ ಮೇಲೆ ಅನುಕಂಪವನ್ನಷ್ಟೇ ಗಿಟ್ಟಿಸಲು ಸಫಲವಾಗಿದೆ. ಹೊರಳಾಡಿ ಬೇಸರವಾದರೆ ಬಾಗಿಲ ಬಳಿ ತುಸು ಹೊತ್ತು ನಿಂತುಕೊಳ್ಳುತ್ತೇನೆ. ಎಲ್ಲವೂ ಖಾಲಿ ಖಾಲಿ. ಎಲ್ಲ ಕೋಣೆಗಳೂ ಬೀಗ ಜಡಿದುಕೊಂಡು ರಾತ್ರಿ ವೇಳೆ ಡಿಪೋದಲ್ಲಿ ನಿಂತ ನಿಶ್ಚಲ ಬಸ್ಸುಗಳಂತೆ ತೋರುತ್ತವೆ. ನನ್ನೊಬ್ಬನನ್ನು ಬಿಟ್ಟು ಈ ಜಗತ್ತಿನಲ್ಲಿ ಮಿಕ್ಕೆಲ್ಲರಿಗೂ ಮಾಡಲು ಕೆಲಸವೊಂದಿದೆ ಎಂದೆನ್ನಿಸುತ್ತದೆ. ಇನ್ನೂ ಬೇಸರವೆನಿಸಿದರೆ ತುಸು ಹೊತ್ತು ಟೆರೇಸಿನ ಮೇಲೆ ಹೊಗಿ ನಿಂತುಕೊಳ್ಳುತ್ತೇನೆ. ಪೋಲಿ ಪುಸ್ತಕಗಳಲ್ಲಿ ಓದಿದ ಅತೃಪ್ತ ಗೃಹಿಣಿಯರು ಕಂಡುಬರುತ್ತಾರೋ ಎಂಬ ಕುತೂಹಲ ಹುಟ್ಟುತ್ತದೆ. ಮನುಷ್ಯ ನಿರುದ್ಯೋಗಿಯಾದರೂ ಮನಸ್ಸು ನಿರುದ್ಯೋಗಿಯಲ್ಲವಲ್ಲ? ಪಾರ್ಕಿಗಾದರೂ ಹೋಗಿ ಕುಳಿತುಕೊಳ್ಳೋಣವೆಂದರೆ ಮಧ್ಯಾಹ್ನದ ವೇಳೆ ಅಲ್ಲಿ ಕಲ್ಲು ಬೆಂಚುಗಳ ಮೇಲೆ ಒಂದಿಷ್ಟು ವೃದ್ಧರು ಕುಳಿತಿರುತ್ತಾರೆ-ನಿವೃತ್ತ ಮಂದಿ. ಶಾಂತಿ ಪರ್ವವೋ, ರಾಮನಿರ್ಯಾಣವೋ ಆಳವಾದ ಚರ್ಚೆ ನಡೆದಿರುತ್ತದೆ. ನನಗೆ ತಾರುಣ್ಯದಲ್ಲಿಯೇ ವಿಪರೀತ ವಯಸ್ಸಾದ ಅನುಭವವಾಗಿ ಎದ್ದು ಹೊರಡುತ್ತೇನೆ.
ಇಂಜನಿಯರಿಂಗ್ ಓದುವ ಕಾಲ ಎಷ್ಟು ಸೊಗಸಾಗಿತ್ತು. ಅಪೂರ್ವವಾದದ್ದೇನೋ ಮಾಡುತ್ತಿದ್ದೇನೆಂಬ ಹೆಮ್ಮೆ ಇತ್ತು. ರಜೆಯಲ್ಲಿ ಊರಿಗೆ ಹೋದರೆ ಜನರ ಉಪಚಾರ, ಆದರ ಬಹಳ ಖುಷಿಕೊಡುತ್ತಿತ್ತು. ಈಗ ಊರಿಗೆ ಹೋಗುವುದೇ ಕಷ್ಟವಾಗಿದೆ “ನಿಮ್ಮನೆ ಮಾಣಿ ಫಾರಿನ್ನಿಗೆ ಯಾವಾಗ ಹೋಗ್ತಾ?” ಎಂಬ ಪ್ರಶ್ನೆ ಅಪ್ಪಯ್ಯನನ್ನು ಹಲವು ಸಲ ಮುಜುಗರಕ್ಕೆ ಸಿಲುಕಿಸಿದೆ. ಈ ಎಂಟು ತಿಂಗಳುಗಳಲ್ಲಿ ಅದೆಷ್ಟು ಕಂಪನಿಗಳಿಗೆ ಅಲೆದಿದ್ದೇನೆ. ಇನ್ನೊಂದು ನಾಲ್ಕು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆಯೆಂದು ಮೆಜೆಸ್ಟಿಕ್ನಲ್ಲಿ ಬೀದಿ ಬದಿ ನಿಂತು ಭವಿಷ್ಯ ನುಡಿಯುವ ಕಂಪ್ಯೂಟರ್ ಉಲಿದಾಗಿದೆ. ''we will get back to you''ಎಂದು ಕಳುಹಿಸಿದ ಯಾರೂ ಇವತ್ತಿನವರೆಗೆ ಉತ್ತರ ನೀಡಿಲ್ಲ. ಕೊಂಚ ವಯಸ್ಸು ಮೀರಿದ ಸುಂದರ ಹುಡುಗಿಗೆ ಇನ್ನೂ ಮದುವೆಯಾಗದಿರುವುದಕ್ಕೆ ಕಾರಣ ಹುಡುಕುವಂತೆ ಜನ ನನಗಿನ್ನೂ ಕೆಲಸ ಸಿಕ್ಕಿಲ್ಲದಿರುವುದಕ್ಕೆ ನನ್ನಲ್ಲೇನೋ ಐಬಿರಬೇಕೆಂಬ ಗುಮಾನಿಗೆ ಬಿದ್ದಿದ್ದಾರೆ. ಒಂದೆರಡು ಪ್ರತಿಷ್ಠಿತ ಕಂಪನಿಗಳಿಗೆ ಲಿಖಿತ ಪರೀಕ್ಷೆ ಬರೆದೆ. ಸಾವಿರಾರು ಜನರ ನಡುವೆ ನನ್ನನ್ನೇ ನಾನು ಕಳೆದುಕೊಂಡ ಅನುಭವ. ಯಾವುದೋ ಬಟ್ಟೆ ಅಂಗಡಿಯ ‘ಒಮ್ಮೆ ಭೇಟಿ ಕೊಡಿ’ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಅಂಕಪಟ್ಟಿ, ಇನ್ನಿತರ ಸರ್ಟಿಫಿಕೇಟ್ಗಳನ್ನು ಇಟ್ಟುಕೊಂಡು ಪ್ಯಾಲಿಯಂತೆ ನಿಂತ ನನ್ನ ಬಗ್ಗೆ ನನಗೇ ಕನಿಕರವೆನ್ನಿಸಿತು. ಇಂಗ್ಲೆಂಡಿನಿಂದ ಈಗಷ್ಟೆ ಉದುರಿಬಿದ್ದಂತೆ ತೋರುವ ಮಿನಿಸ್ಕರ್ಟಿನ ಹುಡುಗಿಯರು ಕೆಲಸಕ್ಕಾಗಿ ಬಂದವರೋ ಅಥವಾ ಸಂದರ್ಶನ ಮಾಡುವವರೋ ಅರ್ಥವಾಗದೇ ಗೊಂದಲಕ್ಕೊಳಗಾಗಿದ್ದೇನೆ. ಎಲ್ಲರೂ ನನಗಿಂತ ಬುದ್ಧಿವಂತರಂತೆ ತೋರುತ್ತಾರೆ ಅಥವಾ ತೋರಿಸುತ್ತಾರೆ. ಪುಸ್ತಕ ಜೀವಿಗಳಂತೆ ಕಾಣುವ ಸೋಡಾಗ್ಲಾಸಿನ ಹುಡುಗರು ನನ್ನ ನೌಕರಿ ಕದಿಯಲೆಂದೇ ಬಂದವರಂತೆ ಕಾಣುತ್ತಾರೆ. ಲಿಖಿತ ಪರೀಕ್ಷೆ ಪಾಸಾದರೂ ಮೌಖಿಕ ಪರೀಕ್ಷೆಯಲ್ಲಿ ತಡವರಿಸಿದೆ. ಜೋಲುಮೋರೆ ಹೊತ್ತು ಪ್ಲಾಸ್ಟಿಕ್ ಬ್ಯಾಗನ್ನು ಎದೆಗೆ ಅವುಚಿ ಹಿಡಿದು ಸಿಟಿ ಬಸ್ಸಿನಲ್ಲಿ ಜೋತಾಡುವಾಗ ಕಣ್ಣು ಮಂಜಾದವು.
- - - - - - - - - - - - - - - - - - - - - - -
ಇಷ್ಟು ದೊಡ್ಡ ಕಂಪನಿಯೊಂದರಲ್ಲಿ ಕೆಲಸಮಾಡಲಿದ್ದೇನೆಂಬ ಕಲ್ಪನೆಯೇ ಇರಲಿಲ್ಲ. ಬೇರೆ ಕ್ಷೇತ್ರಗಳಲ್ಲಿ ೨೦ ವರ್ಷ ಅನುಭವವುಳ್ಳವರಿಗೂ ನನ್ನ ವೇತನ ಸಿಗಲಿಕ್ಕಿಲ್ಲ. ಇದೇ ಸಾಫ್ಟ್ವೇರ್ ಮಹಾತ್ಮೆ. ಜಾಗತೀಕರಣದ ಪರಿಣಾಮ. ಇಲ್ಲಿ ಒಂದೇ ಕ್ಷೇತ್ರದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ ‘ಮಾಗಿ’ದ ಜನ ಸಿಗುವುದು ಕಷ್ಟ. ದಿನಕ್ಕೊಂದು ಮಾಹಿತಿ-ತಂತ್ರಜ್ಞಾನ. ಈ ಉದ್ಯಮದ ನೌಕರರೆಲ್ಲರೂ ಕೊಳ್ಳುವ ಶಕ್ತಿ ಉಳ್ಳವರು.
ಹಿಂದೆ ನೌಕರಸ್ಥರು ಮನೆಕಟ್ಟುವ ಯೋಚನೆ, ಯೋಜನೆ ಮಾಡುವ ಹೊತ್ತಿಗೆ ತಲೆಕೂದಲು ಬೆಳ್ಳಗಾಗಿರುತ್ತಿತ್ತು. ಈಗ ಹಾಗಿಲ್ಲ, ಸಾಫ್ಟ್ವೇರ್ ಉದ್ಯೋಗಿಗೆ ಮೂವತ್ತರ ವೇಳೆಗೆ ಕೈಲೊಂದು ಸೈಟು, ಓಡಾಡಲೊಂದು ಕಾರು ಬಂದಿರುತ್ತದೆ. ಕೂದಲು ಮೊದಲೇ ಬೆಳ್ಳಗಾಗಿರುತ್ತದೆಂಬುದು ಬೇರೆಯದೇ ಸತ್ಯ. ಧುತ್ತೆಂದು ಹುಟ್ಟಿಕೊಂಡ ಈ ಉದ್ಯಮ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಘನತೆಯೇ ಇಲ್ಲವೆಂಬಂತೆ ಮಾಡಿಬಿಟ್ಟಿತಲ್ಲ. ಎಷ್ಟೋ ಸಲ ಹಾಗೆನ್ನಿಸಿದೆ. ಡಾಲರ್ನಿಂದ ವಿನಿಮಯವಾದ ಹಣ ನಮ್ಮ ಸಾಮಾಜಿಕ ವ್ಯವಸ್ಥೆಯನ್ನೇ ಕಲೆಸಿಬಿಟ್ಟಿದೆ. ಮನೆ ಬಾಡಿಗೆಗೆ ಕೊಡುವವನಿಂದ ಹಿಡಿದು ಹೆಣ್ಣು ಕೊಡುವವನವರೆಗೂ ಸಾಫ್ಟ್ವೇರ್ ಉದ್ಯೋಗಿಗೆ ಮೊದಲ ಆದ್ಯತೆ. ಕೂಲಂಕುಶವಾಗಿ ನೋಡಹೋದರೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಭಾರತೀಯ ಕಂಪನಿಗಳಲ್ಲಿ ಬಹುಪಾಲು ಕಂಪನಿಗಳು ಅಮೇರಿಕವೆಂಬ ಹಿರಿಯಣ್ಣನ ಉತ್ಪನ್ನಗಳಿಗೆ ಪಡಿಚಾಕರಿ ಮಾಡಿಕೊಡುವ ಕೆಲಸದಲ್ಲಿ ಮುಳುಗಿವೆ. ಇವಕ್ಕೆ ‘ಸರ್ವೀಸ್ ಇಂಡಸ್ಟ್ರೀಸ್’ ಎಂದು ಹೆಸರು. ನಿಮಗಿಷ್ಟವಾದ ಒಳಕ್ಷೇತ್ರ (ಡೊಮೈನ್) ವೊಂದರಲ್ಲಿ ತಜ್ಞರಾಗುವುದಕ್ಕೆ ಇಲ್ಲಿ ಅವಕಾಶ ಕಡಿಮೆ. ಕಂಪನಿಯ ಸೇವೆ ಯಾವ ಉತ್ಪನ್ನವೋ ಅದರ ಮೇಲೆ ಕೆಲಸ. ಅದು ಮುಗಿದರೆ ಇನ್ನೊಂದು. ಕಾಲೇಜು ಪಾಸಾಗಿ ಸೇರಿದ ತಂತ್ರಜ್ಞಾನಿಗಳು ಮೊದಲಿನ ಒಂದೆರಡು ವರ್ಷಗಳಷ್ಟೇ ನೇರವಾಗಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಾರೆ ಅಥವಾ ಮಾಡಬೇಕಾಗುತ್ತದೆ. ಒಂದು ಅಥವಾ ಎರಡು ಭಡ್ತಿ ಪಡೆದುಬಿಟ್ಟರೆಂದರೆ ಮುಗಿಯಿತು. ಅವರಿಗೂ ತಂತ್ರಜ್ಞಾನಕ್ಕೂ ಅಷ್ಟಕ್ಕಷ್ಟೆ. ಅವರದೇನಿದ್ದರೂ ಜನ ನಿರ್ವಹಣೆ (ಪೀಪಲ್ ಮ್ಯಾನೇಜ್ಮೆಂಟ್). ಲೆಕ್ಕದ ಪಟ್ಟಿ ಇಟ್ಟುಕೊಂಡು ಎಷ್ಟು ಜನರಿಂದ ಎಷ್ಟು ತಾಸು ಕೆಲಸವಾಯಿತು ಎಂಬುದಷ್ಟೇ ಅವರ ತಲೆಬಿಸಿ. ಅವರು ಅಂಕಿ ಉಪಾಸಕರು. ಎಲ್ಲವೂ ಡಾಲರಿನ ಜಾದೂ. ಕಂಪನಿಗಳ ತ್ರೈಮಾಸಿಕ ಲಾಭಾಂಶ ಹೆಚ್ಚಾದಂತೆ ನಗರದ ಪಬ್ಬು, ಬಾರುಗಳ ಆದಾಯವೂ ಹೆಚ್ಚಾಗುತ್ತಿರುವುದು ಸುಳ್ಳಲ್ಲ. ಡಾಲರಿನ ಬೆಲೆ ಒಂದು ರೂಪಾಯಿ ಆದರೆ ಮಾತ್ರ ಈ ವ್ಯವಹಾರಗಳೆಲ್ಲ ಕಷ್ಟಕಷ್ಟ.
ಹಣವೆಲ್ಲಿದೆಯೋ ಜನ ಅಲ್ಲಿ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೋ, ವೈಮಾನಿಕ ಪ್ರಯೋಗಾಲಯಗಳಲ್ಲೋ ಸೇರಿ ಅದ್ಭುತವಾದದ್ದನ್ನು ಸಾಧಿಸಬೇಕೆಂದು ಕನಸು ಕಂಡ ಜನರೂ ಭಾರೀ ವೇತನಕ್ಕೆ ಮನಸೋತು ಸಾಫ್ಟ್ವೇರ್ ಉದ್ಯಮಕ್ಕೆ ಸೇರಿ ಪೂರ್ಣಾವಧಿ ಪಡಿಚಾಕರಿಯಲ್ಲಿ ತೊಡಗಿದ್ದಾರೆ. ಅಲ್ಲಿಂದ ಬಿಟ್ಟು ಇಲ್ಯಾಕೆ ಬರುವುದಾಯಿತು ಎಂದು ಸಮಜಾಯಿಷಿ ಕೊಟ್ಟು ಕೊಟ್ಟು ಹೈರಾಣಾಗಿದ್ದಾರೆ. ವೇತನದ ವಿಷಯ ಮಾತ್ರ ಬಾಯಿ ಬಿಡಲಾರರು. ದೇಶದ ಅತಿಶ್ರೇಷ್ಠ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಉದ್ಯಮಕ್ಕೆ ಸೇರಿದ ಅತಿಬುದ್ಧಿವಂತ ವರ್ಗಕ್ಕೆ ತಮ್ಮ ಸಾಮರ್ಥ್ಯಕ್ಕೆ ತಕ್ಕದಾದ ಕೆಲಸ ಕೊಡುತ್ತಿಲ್ಲವೆಂಬ ಅಸಮಾಧಾನವಿದೆ. ಇವರಿಗೆ ಓದಿನಲ್ಲಿದ್ದ ಅಪಾರ ಶೃದ್ಧೆ ಕೆಲಸದಲ್ಲಿ ಏಕಿಲ್ಲವೆಂಬುದು ಕೆಲಸ ಕೊಟ್ಟವನ ಚಿಂತೆ.
ಏನೇ ಆದರೂ ನನ್ನಂತಹ ಕುಗ್ರಾಮದ ಹಿನ್ನೆಲೆಯಿಂದ ಬಂದ ಬಡ ಪುರೋಹಿತರ ಮಾಣಿಯನ್ನು ಫಾರಿನ್ನೆಂಬ ಫಾರಿನ್ನಿಗೆ ಕಳುಹಿಸಿದ್ದು ಸಾಫ್ಟ್ವೇರ್ ಉದ್ಯಮವೇ. ಅಪ್ಪಯ್ಯನ ಸೊಸೈಟಿ ಸಾಲ ತೀರಿ ಬಹಳೇ ದಿನಗಳಾದವು. ತಲೆಮಾರುಗಳಷ್ಟು ಹಳತಾದ ಗೆದ್ದಲು ಹಿಡಿದಿದ್ದ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಅಪ್ಪಯ್ಯನಿಗೂ ಊರಲ್ಲೆಲ್ಲ ಕೊಂಚ ಜಾಸ್ತಿಯೇ ಗೌರವ ಸಿಗುತ್ತಿದೆ. ಸೌಮ್ಯಳಂತಹ ಸುಂದರಿಯ ರೊಕ್ಕಸ್ತ ಅಪ್ಪ ಮಗಳನ್ನು ಕೊಡಲು ಮುಂದಾಗಿದ್ದು ಇತ್ತೀಚಿನ ಬೆಳವಣಿಗೆ. ಜಾಗತೀಕರಣದ ಪರಮ ಬೆಂಬಲಿಗರಾದ ನನ್ನ ಸ್ನೆಹಿತರುಗಳು ದೇಶದಲ್ಲಿ ಸಾಮಾಜಿಕ ಸಮತೋಲನ ಏರ್ಪಡುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ವಾದ ಹೂಡಿದ್ದಾರೆ. ಈ ಸಮತೋಲನಕ್ಕೆ ನನ್ನ ಬ್ಯಾಂಕ್ ಬ್ಯಾಲೆನ್ಸ್ನಿಂದ ನೇರ ಸಂಬಂಧವಿರುವುದು ಬಹಿರಂಗ ಸತ್ಯವಾದರೂ ಹೇಳುವಂತಿಲ್ಲ.
ಸಿನಿಪರದೆಯ ಮೇಲೆ ಚಿತ್ರಗಳು ಓಡುತ್ತಿದ್ದರೂ ನನ್ನ ತಲೆಯಲ್ಲಿ ಬೇರೆಯದೇ ಚಿತ್ರಗಳು ಸುಳಿದಾಡುತ್ತಿವೆ. ನನ್ನ ಸುದೀರ್ಘ ಮೌನ ಸೌಮ್ಯಳಿಗೆ ಬೇಸರ ತರಿಸಿರಬೇಕು. ತಲೆಯ ಮೇಲೆ ಮೆಲ್ಲನೆ ಮೊಟಕಿ “ಏನಾಯಿತು?” ಎಂದಳು.
- - - - - - - - - - - - - - - - - - - - - - -
ತಲೆಯ ಮೇಲೆ ಏನೋ ಧೊಪ್ಪನೆ ಬಿದ್ದಂತಾಗಿ ಎಚ್ಚರವಾಯಿತು. ಫ್ಯಾನಿನ ಮೊರೆತ ನಿರಾತಂಕವಾಗಿ ಸಾಗಿತ್ತು. ಕಿಟಕಿಯಿಂದ ಎಸೆದ ಎರಡು ಪತ್ರಗಳು ಮುಖದ ಮೇಲೆಯೇ ಬಿದ್ದಿದ್ದವು. ಎದ್ದು ಕುಳಿತೆ. ಕನಸಿನಿಂದ ಹೊರಕ್ಕೆ ಬರುವುದೇ ಕಷ್ಟವಾಯಿತು. ಒಂದು ಲೋಟ ತಣ್ಣನೆಯ ನೀರನ್ನು ಗಟಗಟನೆ ಗಂಟಲಿಗಿಳಿಸಿದೆ. ಅಸ್ತವ್ಯಸ್ತವಾಗಿದ್ದ ಪಂಚೆಯನ್ನು ಬಿಗಿದು ಕಟ್ಟಿದೆ. ಕೆಳಗಡೆ ಓನರತಿ ಸಾವಿತ್ರಮ್ಮ ಪಕ್ಕದ ಮನೆ ಹೆಂಗಸಿನೊಡನೆ ಜಗಳ ಕಾಯುತ್ತಿದ್ದಳು. ಪತ್ರಗಳನ್ನು ಬಿಡಿಸಿ ನೋಡಿದೆ. ಒಂದು ವಿಷಾದ ಪತ್ರ. ಇನ್ನೊಂದು ಇನ್ಯಾವುದೋ ಕಂಪನಿಯಿಂದ ಸಂದರ್ಶನಕ್ಕೆ ಕರೆ. ನನ್ನ ಬಗ್ಗೆ ನನಗೇ ಕನಿಕರವೆನಿಸಿತು.
ಕನಸಿನಲ್ಲಿ ಕಂಡ ಆ ಹುಡುಗಿಯನ್ನು ಎಲ್ಲೋ ನೋಡಿದ್ದೇನೆಂಬ ಭಾವ. ಅರೆರೆ ಅವಳು ಇಲ್ಲಿಯೇ ಬೆಳಗಿನ ಹೊತ್ತು ಹಾಲು ಮಾರುವ ಹುಡುಗಿ! ಥತ್ ಎಂದುಕೊಂಡು ಎದ್ದು ಬಾತ್ರೂಮಿನ ಕಡೆ ನಡೆದೆ. ಬಾತ್ರೂಮಿನ ಚಿಕ್ಕ ಕಿಟಕಿಯಿಂದ ಸಾವಿತ್ರಮ್ಮನ ಟಿವಿಯಲ್ಲಿನ ಆರ್.ಕೆ.ಜೈನರ ಭವಿಷ್ಯ ಕಾರ್ಯಕ್ರಮ ಕೇಳಿ ಬರುತ್ತಿತ್ತು. “ಎರಡನೇ ಮನೆ ಯಲ್ಲಿ ರಾಹು, ಮೂರನೇ ಮನೆಯಲ್ಲಿ ಕೇತು, ನಾಲ್ಕನೇ ಮನೆಯಲ್ಲಿ ಶನಿ . . . . . .” ನಾನು ಲೆಕ್ಕ ಹಾಕಿಕೊಂಡೆ. ನಾಲ್ಕನೇ ಕೋಣೆಯಲ್ಲಿರುವುದು ನಾನೇ. ಅಂದರೆ ನನ್ನ ಕೋಣೆಯಲ್ಲಿಯೇ ಶನಿ ಇರಬಹುದೇ? ಅಥವಾ ನಾನೇ ಶನಿಯೇ?
ನಾಳಿದ್ದಿನ ಸಂದರ್ಶನಕ್ಕೆ ಏನಾದರೂ ತಯಾರಿ ನಡೆಸಬೇಕಾಗಿದೆ. ಎಲ್ಲೆಡೆ ತಡಕಾಡಿ ಚಿಲ್ಲರೆ ಒಟ್ಟುಮಾಡಿದೆ. ಪಕ್ಕದ ದರ್ಶಿನಿಯಲ್ಲಿ ಚಹದ ಋಣ ಇತ್ತೆಂದು ತೋರುತ್ತದೆ. ಮೆಟ್ಟಿಲಿಳಿಯತೊಡಗಿದೆ. “ಎರಡನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ . . . .” ಇನ್ನೂ ಸಾಗಿತ್ತು. ಇವರಿಗೆಲ್ಲ ಅವರವರ ಮನೆಯಲ್ಲಿ ಇರಲಿಕ್ಕೆ ಏನು ಧಾಡಿ ಎಂದು ಬೈದುಕೊಳ್ಳುತ್ತಾ ದರ್ಶಿನಿಯತ್ತ ಹೆಜ್ಜೆ ಹಾಕಿದೆ. *. . . . . * . . . . . * . . . . . * . . . . . * . . . . . .*