Friday, January 16, 2009

ಇತ್ತೀಚೆಗೆ ಭೀಮಸೇನ್ ಜೋಶಿಯವರಿಗೆ ಭಾರತರತ್ನ ಘೋಷಣೆಯಾದ ಸಂದರ್ಭದಲ್ಲಿ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ.

ಸಂಗೀತ ಲೋಕದ ಭೀಮಸೇನರೀಗ ಭಾರತ ರತ್ನ


ಬಹಳ ತಡವಾಯಿತು. ಭಾರತೀಯರಿಗೆ ಸಂಗೀತಲೋಕದ ಈ ‘ಭೀಮಸೇನ’ ಭಾರತದ ರತ್ನವೆಂದು ಮನದಟ್ಟಾಗಿ ಬಹುಕಾಲವಾಗಿತ್ತು. ದೆಹಲಿ ದೊರೆಗಳು ಇನ್ನೂ ವಯಸ್ಸಾಗಿಲ್ಲ ಎಂದು ಕಾದಿದ್ದರೆಂದು ಕಾಣುತ್ತದೆ. ಭೀಮಸೇನ್ ಜೋಶಿಯವರಿಗೆ ಭಾರತರತ್ನ ಕೊಡದಿದ್ದರೆ ಏನಾಗುತ್ತಿತ್ತು? ಏನೂ ಆಗುತ್ತಿರಲಿಲ್ಲ. ನೊಬೆಲ್ ಕೊಡಮಾಡದೇ ಗಾಂಧೀಜಿ ವಿಶ್ವಶ್ರೇಷ್ಠರಾಗಿ ಉಳಿದಿಲ್ಲವೇ? ಅಂತೆಯೇ ಭೀಮಸೇನರು. ಆಂತೂ ಭಾರತರತ್ನ ಪ್ರಶಸ್ತಿಯ ಮೌಲ್ಯ ಜಾಸ್ತಿಯಾಯಿತು. ಕನ್ನಡಿಗರು ಹೆಮ್ಮೆಪಡುವಂತಾಯಿತು.
ಜೋಶಿಯವರ ಸಂಗೀತ ಆಸ್ವಾದಿಸಲು ನೀವು ಸಂಗೀತ ಅಭ್ಯಾಸ ಮಾಡಿರಬೇಕಿಲ್ಲ. ಅವರ ಆಪ್ತದನಿಯಲ್ಲಿ ಕೇಳಿಬರುವ ದಾಸವಾಣಿಗೆ ಇಡೀ ಕನ್ನಡ ಜನತೆಯೇ ಮರುಳಾಯಿತು. ಕ್ಯಾಸೆಟ್ಟು ತಿರಿಸಿ ಮುರಿಸಿ ಹಾಕಿ ಸವೆಸಿದರು ಜನ. ಭಜನೆ, ಅಭಂಗ್, ಠುಮ್ರಿ, ಖ್ಯಾಲ್ ಹೀಗೆ ಹಲವು ಪ್ರಾಕಾರಗಳಲ್ಲಿ ಏಕ ರೀತಿಯ ಪ್ರಭುತ್ವ ಸಾಧಿಸಿದ ಅಪರೂಪದ ಸಾಧಕರವರು.
ಬೆಲ್ಲದ ಸಿಹಿ ಹೇಗಿರುತ್ತದೆ ಎಂಬುದನ್ನು ನಿವೆಷ್ಟೇ ಪದಪುಂಜಗಳಿಂದ ವಿವರಿಸಿದರೂ ಪ್ರಯೋಜನವಿಲ್ಲ. ಬೆಲ್ಲ ತಿಂದಾಗಲೇ ಅದರ ಅನುಭೂತಿ ನಮಗೆ ದಕ್ಕುವುದು. ಭೀಮಸೇನರ ಸಂಗೀತವನ್ನು ಪದಗಳಲ್ಲಿ ಹಿಡಿಯುವುದು ಕಷ್ಟ. ಹಿಂದುಸ್ತಾನಿ ಸಂಗೀತಕ್ಕೆ ಒಂದು ಮಸ್ಕ್ಯೂಲರ್ ರೂಪ ಕೊಟ್ಟವರು ಭೀಮಸೇನರು. ನನಗೆ ಅವರ ಲಲಿತ್ ಭಟಿಯಾರ್ ನ “ಓ ಕರತಾರ್” ನಂತಹ ಬಂದಿಷ್ ಗಳನ್ನು ಕೇಳಿದಾಗಲೆಲ್ಲ ಜರ್ಮನ್ ನಿರ್ಮಿತ ಸುಂದರ ಆದರೆ ಸದೃಢಕಾಯದ ಕಾರುಗಳು ನೆನಪಾಗುತ್ತವೆ. ಹೆಣ್ಣಿನ ಸೌಂದರ್ಯ ಮತ್ತು ಪುರುಷನ ಬಲದ ಬಹು ನಾಜೂಕಿನ ಮಿಶ್ರಣದಂತೆ ಭಾಸವಾಗುತ್ತದೆ ಜೋಶಿಯವರ ಗಾಯನ. ವಿಲಂಬತಗಳಲ್ಲಿ ರಾಗದ ವಾತಾವರಣವನ್ನು ನಿರ್ಮಿಸುವಾಗ ಶಾಂತವಾಗಿ ಹರಿಯುವ ಬಯಲುಸೀಮೆಯ ನದಿಗಳಂತೆ ಭಾಸವಾಗುವ ಅವರ ಗಾಯನವು ಮಧ್ಯ ಲಯದ ತಾನುಗಳ ಇಕ್ಕಟ್ಟಿನ ಹಾದಿಯಲ್ಲಿ ಚಲಿಸುವಾಗ ರಮಣೀಯವಾಗುತ್ತಾ, ಧೃತ್ ನಲ್ಲಿ ಧುಮ್ಮಿಕ್ಕುವ ಜಲಪಾತವಾಗಿ ರುದ್ರರಮಣೀಯ ಅನುಭವವನ್ನು ಕೊಡುತ್ತದೆ. ಭೀಮಸೇನರ ದನಿಗೆ ಕೇಳುವವರನ್ನು ಸಮ್ಮೋಹನಗೊಳಿಸುವ ಶಕ್ತಿ ಎಲ್ಲಿಂದ ಬರುತ್ತದೆ ಎಂದರೆ ಅವರ ಪರಿಪೂರ್ಣವಾದ ‘ಸುರೇಲಿ’ (ಶೃತಿಬದ್ಧವಾಗಿ) ಹಾಡುವ ಸಾಧನೆಯಿಂದ. ಈ ಸುರೇಲಿಯೆಂಬುದು ಅವರ ಅತಿವೇಗದ ತಾನುಗಳಿಂದ ಹಿಡಿದು ಗಾಯನದ ಯಾವುದೇ ಸ್ತರಗಳಲ್ಲಿ ಸ್ಥಾಯಿಯಾಗಿಯೇ ಇರುತ್ತದೆ ಎಂಬುದೇ ಅವರ ಗಾಯನದ ಮುಖ್ಯವಾದ ಹಿರಿಮೆ. ಈ ಕಾರಣಕ್ಕಾಗಿಯೇ ಅವರು ರಾಗ ಕಾಫಿಯಲ್ಲಿ ಹಾಡಿದ ‘ಪಿಯಾ ತೊ ಮಾನತ ನಾಹಿ’ ಯಂತಹ ಪ್ರೇಮಿಯೊಬ್ಬಳ ವಿರಹ ಸಂವೇದನೆಯ ಠುಮ್ರಿ ನಮ್ಮನ್ನು ಭಾವ ಪರವಶಗೊಳಿಸುತ್ತದೆ. ಈ ಭಾವವನ್ನು ಚಿತ್ರಿಸುತ್ತಿರುವುದು ಗಡಸುದನಿಯ ಪುರುಷ ಗಾಯಕ ಎಂಬ ಅರಿವೇ ನಮಗೆ ಮೂಡುವುದಿಲ್ಲ.
ಖ್ಯಾತ ಹಾರ್ಮೋನಿಯಮ್ ವಾದಕರಾದ ವಸಂತ್ ಕನಕಾಪುರ ಅವರು ಎಸ್ ಪಿ ಬಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ನನಗೆ ಜೋಶಿಯವರಿಗೆ ಸಾಥ್ ಮಾಡುವದು ಯಾವಾಗಲೂ ಒಂದು ಸವಾಲು” ಎಂದಿದ್ದರು. ಅದು ಅವರ ವಾದನದಲ್ಲಿಯ ಕೊರತೆ ಎಂದಲ್ಲ. ಅವರೇ ಹೇಳುವಂತೆ “ಭೀಮಸೇನರು ಹಾಡುವಾಗ ಎಷ್ಟು ತಲ್ಲೀನನಾಗಿಬಿಡುತ್ತೇನೆ ಎಂದರೆ ನಾನು ನನ್ನ ಕೆಲಸವನ್ನೇ ಮರೆತುಬಿಡುತ್ತೇನೆ”.
ನಾವು ಜೋಶಿಯವರನ್ನು ಕೇಳಲು ಆರಂಭಿಸುವ ಹೊತ್ತಿಗಾಗಲೇ ಅವರ ಪರಾಕಾಷ್ಠತೆಯ ಕಾಲ ಕಳೆದು ಹೋಗಿತ್ತು. ಅಂದರೆ ಅವರ ಸಂಗೀತ ಕಳೆಗುಂದಿತ್ತು ಎಂದಲ್ಲ. ಅಲ್ಲಿ ಆರ್ಭಟದ ತಾನುಗಳ ಜಲಪಾತ ಕೊಂಚ ಕಡಿಮೆಯಾಗಿತ್ತು. ಮುಂಬಯಿ, ಪುಣೆಗಳಂತಹ ಷಹರಗಳಲ್ಲಿ ಒಂದೇ ದಿನದಲ್ಲಿ ಎರಡು ಮೂರು ಕಡೆ ಅವರ ಕಛೇರಿಗಳಿರುತ್ತಿದ್ದವು ಎಂದು ಹಿರಿಯೊಬ್ಬರು ನೆನೆಸಿಕೊಂಡಾಗ ನನ್ನಂತಹವರಿಗೆ ಇಂತಹ ಸುವರ್ಣಕಾಲದಲ್ಲಿ ನಾನು ಹುಟ್ಟಿರಲಿಲ್ಲ ಎಂದು ಖೇದವಾಗುತ್ತದೆ. ಹೆಚ್ ಎಂ ವಿ ಎಂಬ ಸಂಸ್ಥೆ ಈ ಮಹಾನ್ ಕಲಾವಿದನನ್ನು ಹೋದಲ್ಲಿ ಬಂದಲ್ಲಿ ಕಾಡಿ ದುಡಿಸಿಕೊಳ್ಳದೇ ಹೋಗಿದ್ದರೆ ಜೋಶಿಯವರ ಆಳ ಅಗಲಗಳು ಈ ತಲೆಮಾರಿಗೆ ತಿಳಿಯುತ್ತಲೇ ಇರಲಿಲ್ಲ. ಕೋಮಲ್ ವೃಷಭ್ ಅಸಾವರಿ ನಮಗೆ ಸಿಕ್ಕುತ್ತಿರಲಿಲ್ಲ. ಅತಿ ಸುಂದರವಾಗಿ ಕಡೆದಿಟ್ಟ ಭೈರವಿ ಠುಮ್ರಿ ’ಬಾಬುಲ್ ಮೊರಾ’ ದಿಂದ ನಾವು ವಂಚಿತರಾಗಿಬಿಡುತ್ತಿದ್ದೆವು. ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಸಂಗೀತೋತ್ಸವವೊಂದರಲ್ಲಿ ರಾಗ ಮುಲ್ತಾನಿಯಲ್ಲಿ ಹಾಡಿದ ‘ನೈನನ ಮೆ ಆನ ಬಾನ’ ಧ್ವನಿ ಸುರುಳಿ ಮೈ ನವಿರೇಳಿಸುವಂತಿದೆ. ಅಲ್ಲಿ ಹಾಜರಿದ್ದ ಆ ಕಾಲಘಟ್ಟದ ಪ್ರಮುಖ ಕಲಾವಿದೆ ರೋಷನಾರಾ ಬೇಗಮ್ ಜೋಶಿಯವರು ಈ ರಾಗ ಮುಗಿಸಿದ ಬಳಿಕ ಆನಂದ ಭಾಷ್ಪ ಸುರಿಸುತ್ತಾ ಬಂದು ಭೀಮಸೇನರನ್ನು ಆಲಂಗಿಸಿದ್ದರ ಉಲ್ಲೇಖವಿದೆ.
ಭೀಮಸೇನರ ಇತಿಹಾಸ ಗಮನಿಸಿದರೆ ಅವರು ಸಂಗೀತಕ್ಕಾಗಿಯೇ ಹುಟ್ಟಿದವರು ಎನ್ನಲು ಯಾವ ಅಡ್ಡಿಯೂ ಇಲ್ಲ. ಸಂಗೀತದ ಕಲಿಕೆಗಾಗಿ ಬಾಲ್ಯದಲ್ಲಿಯೇ ಮನೆಬಿಟ್ಟು ಹೋದ ಅವರು ಆ ಉದ್ದೇಶಕ್ಕಾಗಿ ಭಾರತದ ಉದ್ದಗಲ ಅಲೆದಿದ್ದಾರೆ. ಅವರ ಪರಿಣಾಮಕಾರಿ ಆಲಾಪ್ ಗಳ ಹಿಂದೆ, ಬಲಶಾಲಿ ತಾನ್ ಗಳ ಹಿಂದೆ ಒಬ್ಬ ತೀವ್ರ ಹಠವಾದಿ ಸಾಧಕನಿದ್ದಾನೆ. ಒಂದೆರಡು ರಾಗ ಕಲಿತು ದಿಢೀರ್ ಜನಪ್ರಿಯತೆಗಳಿಸುವ ಉದ್ದೇಶವೇ ಅವರಿಗಿರಲಿಲ್ಲ. ಆದರೆ ರಂಗಕ್ಕೆ ಇಳಿದ ಮೇಲೆ ಅವರು ಮೆಟ್ಟಿಲು ಹತ್ತಿದರೇ ಹೊರತು ಇಳಿಯಲಿಲ್ಲ.
ಕಿರಾನಾ ಘರಾಣೆಯ ಸ್ಥಾಪಕರಾದ ಉಸ್ತಾದ್ ಕರೀಂ ಖಾನ್ ರನ್ನು ಕೇಳಿದರೆ ನಮಗೆ ಭೀಮಸೇನರ ಗಾಯಕಿಯ ಮೇಲೆ ಅಪಾರ ಪ್ರಭಾವ ಬೀರಿದ್ದನ್ನು ಗಮನಿಸಬಹುದು. ಕರೀಂ ಖಾನ್ ರದ್ದು ಬಲು ಕೋಮಲವಾದ ಮಧುರವಾದ ಧ್ವನಿ. ಜೋಶಿಯವರು ಅವರ ಒಳ್ಳೆಯ ಅಂಶಗಳನ್ನೆಲ್ಲ ತಮ್ಮ ಗಾಯಕಿಯಲ್ಲಿ ಅಳವಡಿಸಿಕೊಂಡರು. ಇನ್ನು ಕರಿಂ ಖಾನ್ ರ ಶಿಷ್ಯರೇ ಆಗಿದ್ದ ಸವಾಯಿ ಗಂಧರ್ವರ (ಭೀಮ ಸೇನರ ಗುರುಗಳು) ಪ್ರಭಾವ ಜೋಶಿಯವರ ಮೇಲೆ ಆಗಿರಲೇಬೇಕು.ಜೋಶಿಯವರ ಪ್ರಕಾರ “ಎಲ್ಲಾ ಕಲಾವಿದನಲ್ಲೂ ಒಬ್ಬ ಚೋರನಿರುತ್ತಾನೆ. ಯಾರನ್ನಾದರೂ ನಕಲು ಮಾಡುವುದು ಸುಲಭ ಆದರೆ ಅದನ್ನು ಅಸಲು ಮಾಡಿಕೊಂಡು ಪ್ರಸ್ತುತಪಡಿಸುವುದರಲ್ಲಿ ಕಲಾವಿದನ ಸೃಜನಶೀಲತೆಯಿದೆ”.
ಜೋಶಿಯವರ ವೈಶಿಷ್ಟ್ಯವೇನೆಂದರೆ ಅವರ ಮಟ್ಟದ ಕಲಾವಿದರಾಗುವುದು ಹಾಗಿರಲಿ, ಜೋಶಿಯವರನ್ನು ಸಮರ್ಥವಾಗಿ ಅನುಕರಿಸುವುದೂ ನಮ್ಮ ಹಲವು ಕಲಾವಿದರಿಂದ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಭೀಮಸೇನರನ್ನು ಅನುಕರಿಸಿ ಹಾಡುವವರ ದಂಡೇ ಬೆಳೆದಿತ್ತು, ಅದರಲ್ಲೂ ಕರ್ನಾಟಕದಲ್ಲಿ. ಬಹುಪಾಲು ಗಾಯಕರು ತಮ್ಮ ಅಸಲಿ ಮಧುರ ಧ್ವನಿಯನ್ನು ಬಿಟ್ಟು ಜೋಶಿಯವರ ಗಡಸು ಧ್ವನಿಯನ್ನು ಅನುಕರಿಸಲು ಸಮಯ ವ್ಯರ್ಥ ಮಾಡಿದರು. ಕೆಲವರು ಜೋಶಿಯವರಂತೆ ನೆಟ್ಟಗೆ ಕುಳಿತುಕೊಳ್ಳುವದನ್ನು ಅನುಕರಿಸಿದರು. ಇನ್ನೂ ಕೆಲವರು ಜೋಶಿಯವರ ಹಿಂದೆ ಎಷ್ಟು ಜನ ತಂಬೂರ ಸಾಥಿಯವರನ್ನು ಕೂರಿಸಿಕೊಳ್ಳುತ್ತಾರೋ ಅಷ್ಟೇ ಜನರನ್ನು ತಾವೂ ಹಿಂದುಗಡೆ ಬಿಟ್ಟುಕೊಂಡು ಹಾಡಿ ನೋಡಿದರು. ಅವರ ಗಾಯಕಿ ಮಾತ್ರ ಯಾರಿಗೂ ಹತ್ತಲಿಲ್ಲ. ಆಲದ ಮರದ ಬುಡದಲ್ಲಿ ಬೆಳೆಯುವ ವ್ಯರ್ಥ ಪ್ರಯತ್ನವೇ ಆಯಿತು.
ಜೋಶಿಯವರು ಮುಂದಿನ ಸಾಲಿನ ವಿದ್ವಾಂಸರನ್ನು ಮೆಚ್ಚಿಸುವದಕ್ಕೆ ಆತುರ ತೋರಿದ್ದು ಕಡಿಮೆಯೇ ಎನ್ನಬಹುದು. “ಗಾಯಕನಾಗಿರದಿದ್ದರೆ ಕಾರ್ ಮೆಕ್ಯಾನಿಕ್ ಆಗಿರುತ್ತಿದ್ದೆ’‘ ಎನ್ನುವ ಜೋಶಿಯವರು ಗಾಯನದ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದವರಲ್ಲ. ಅವರ ಹಾಗೆ ಮೈಕ್ ಗಳನ್ನು ಪರಿಣಾಮಕಾರಿಯಾಗಿ ಬಳಸುವ ಕಲಾವಿದರು ವಿರಳ. ಹಾಡುವಾಗ ಮುಖವನ್ನು ಮೈಕಿನ ದೂರಕ್ಕೂ, ಹತ್ತಿರಕ್ಕೂ ತರುತ್ತಾ ಆ ಮೂಲಕ ಉಂಟುಮಾಡುವ ಶಬ್ದ ವ್ಯತ್ಯಾಸಗಳು ಕೇಳುಗನಿಗೆ ವಿಭಿನ್ನ ಅನುಭವವನ್ನು ನೀಡುತ್ತವೆ. ಲಯಕ್ಕೆ ಬಹಳ ಮಹತ್ವ ಕೊಡುತ್ತಿದ್ದರಾದರೂ ಲೆಕ್ಕಾಚಾರಗಳಲ್ಲಿ ಮುಳುಗಿ ಗಾಯನ ಹದಗೆಡೆಸಿಕೊಂಡವರಲ್ಲ. ಅವರ ಪ್ರಕಾರ “ಗಾಯನದಲ್ಲಿ ತಿ ಹೈ ಗಳು ಗಣಿತ ಲೆಕ್ಕಾಚಾರದ ಫಲಗಳಾಗಿ ಹೊರಹೊಮ್ಮದೇ ಅವೇ ಅವಾಗಿ ಪ್ರಕಟಗೊಂಡರೆ ಚೆಂದ”.
ಇವೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ಭಾವಪೂರ್ಣ ಭಜನೆಗಳಿಂದ ಅವರು ನಮ್ಮೆಲ್ಲರ ಮನದಲ್ಲಿ ನಿಂತಿದ್ದಾರೆ. ಜನಪ್ರಿಯನಾದವನು ಶ್ರೇಷ್ಠನೂ ಆಗಬಹುದೆಂಬುದಕ್ಕೆ ಅವರು ಒಳ್ಳೆಯ ಉದಾಹರಣೆ.ಭೀಮಸೇನರನ್ನು ನಾವು ಕನ್ನಡಿಗರು ಎಷ್ಟು ಪ್ರೀತಿಸುತ್ತೇವೆಯೋ ಅದರ ಇಮ್ಮಡಿಯಾದ ಪ್ರೀತಿ ಅವರ ಮೇಲೆ ಮರಾಠಿಗರಿಗಿದೆ. ಎಷ್ಟೋ ಮರಾಠಿಗರಿಗೆ ಜೋಶಿಯವರ ಕನ್ನಡದ ಮೂಲದ ಬಗ್ಗೆ ತಿಳಿದೇ ಇಲ್ಲ. ಹಲವು ದಶಕಗಳ ಕಾಲ ತಮ್ಮ ಅತ್ಯುತ್ತಮ ದರ್ಜೆಯ ಸಂಗೀತ ಉಣಬಡಿಸಿದ ಇಂತಹ ಅಪ್ರತಿಮ ಗಾರುಡಿಗನಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಂದಿದ್ದು ಬಹಳದ ಸಂಗತಿ. ಇಂತಹ ದೈತ್ಯಪ್ರತಿಭೆ “ಸಂಗೀತ ಕ್ಷೇತ್ರದ ಎಲ್ಲಾ ಸಾಧಕರ ಪರವಾಗಿ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ” ಎಂದಿದ್ದು ಬಹು ದೊಡ್ಡ ಮಾತು. ಸಮಸ್ತ ಕನ್ನಡಿಗರ ಪರವಾಗಿ ನಾಡಿನ ಎರಡನೇ ಭಾರತರತ್ನಕ್ಕೆ ಅಭಿನಂದನೆಗಳು.
-ಚಿನ್ಮಯ.
ಪ್ರಕಟಿಸಿದ ವಿಜಯ ಕರ್ನಾಟಕಕ್ಕೆ ವಂದನೆಗಳು.

ಫೋಟೊ ಇಂಟರ್ ನೆಟ್ ನಿಂದ ಡೌನ್ ಲೋಡ್ ಮಾಡಿದ್ದು.