Wednesday, October 15, 2008

ನಿಂತು ನಗಿಸುವ ಗಾರುಡಿ

ಇತ್ತೀಚೆಗೆ ಹಾಸ್ಯೋತ್ಸವಗಳನ್ನು ನಾನು ನೋಡಿಲ್ಲ. ಕನ್ನಡದಲ್ಲಿ ಇವುಗಳು ದೊಡ್ಡ ಪ್ರಮಾಣದಲ್ಲಿ ಪ್ರಚಲಿತಕ್ಕೆ ಬಂದೇ ಆರೆಂಟು ವರ್ಷಗಳಾದವೇನೋ. ಬಹುಬೇಗ ಜನಪ್ರಿಯತೆಯ ಪರಾಕಾಷ್ಟತೆ ತಲುಪಿ ಮೆರೆದ ಇದರ ಈಗಿನ ಸ್ಥಿತಿ ನಮ್ಮ ಈಗಿನ ಷೇರು ಸೂಚ್ಯಂಕದಷ್ಟೇ ಕೆಳಕ್ಕೆ. ಹೆಚ್ ಎನ್ ಕಲಾಕ್ಷೇತ್ರದಲ್ಲಿ ಪ್ರತಿ ಕ್ರಿಸ್ಮಸ್ ದಿನದಂದು ನಡೆಯುತ್ತಿದ್ದ ಹಾಸ್ಯೋತ್ಸವಕ್ಕೆ ಹೆಂಗಸರು ಮಕ್ಕಳಾದಿಯಾಗಿ ಬೆಳಿಗ್ಗೆ ಆರಕ್ಕೇ ಬಂದು ಕೂರುತ್ತಿದ್ದುದು ನೆನಪಾಗುತ್ತದೆ. ಪ್ರೊ. ಅ. ರಾ ಮಿತ್ರ ತುಂಬ ಸೊಗಸಾಗಿ ನೆಡೆಸಿಕೊಡುತ್ತಿದ್ದರು. ಈಗಲೂ ಅದೇ ಆಕರ್ಷಣೆ ಅಲ್ಲಿ ಉಳಿದಿದೆಯೋ ಇಲ್ಲವೋ ತಿಳಿದಿಲ್ಲ.
ಆಮೇಲೆ ಶುರುವಾಯಿತು ನೋಡಿ, ಗಲ್ಲಿ ಗಲ್ಲಿಗಳಲ್ಲಿ ದಿನ ಬೆಳಗಾದರೆ ಹಾಸ್ಯೋತ್ಸವ. ಜೋಕುಗಳು ಹಪ್ಪು ಹಳಸಲಾದರೂ ಬಿಡದೇ ಅಗಿದರು ನಗೆಗಾರರು. ಸರ್ದಾರ್ ಜಿ ಜೋಕುಗಳು, ಇಂಟರ್ ನೆಟ್ ಜೋಕುಗಳು, ಬೀಚಿ ಜೋಕುಗಳು ಎಲ್ಲ ಮುಗಿದ ಮೇಲೆ ಅವರಾದರೂ ಏನು ಮಾಡಿಯಾರು? ತಮ್ಮ ಸೃಜನಶೀಲತೆಯಿಂದ ಸೃಷ್ಟಿಸಿದ ಅದ್ಭುತ ಉತ್ಪತ್ತಿಗಳಿಂದ ಸ್ವತಃ ಬೀಚಿಯವರಿಗೆ ಎಷ್ಟು ಉತ್ಪನ್ನ ಹುಟ್ಟಿತ್ತೋ ಗೊತ್ತಿಲ್ಲ ಆದರೆ ಅವರು ಸಂದು ಹಲವು ವರ್ಷಗಳ ನಂತರ ಕೆಲವು ಜನರ ಹೊಟ್ಟೆ ತುಂಬಿಸಿದ್ದಂತೂ ನಿಜ. ಗಮನಿಸಬೇಕಾದ್ದೆಂದರೆ ಬೀಚಿ ಎಂದರೆ ಏನೆಂದು ಗೊತ್ತಿಲ್ಲದ ಮತ್ತು ಹೆಸರಷ್ಟೇ ಕೇಳಿದ್ದ ಜನಕ್ಕೂ ರಾಯಸಂ ಭೀಮಸೇನ್ ರಾವ್ ರ ತಾಕತ್ತೇನೆಂದು ತಿಳಿಯಿತು. ಪ್ರಾಣೇಶರಂತವರಿಗೆ ಅದರ ಪಾಲು ಸಲ್ಲಬೇಕಾದ್ದೇ.
ಪಾಶ್ಚಾತ್ಯರಲ್ಲಿ ಸ್ಟಾಂಡ್ ಅಪ್ ಕಾಮಿಡಿ ಎಂಬುದು ಬಹಳ ಹಳೆಯ ಮತ್ತು ಜನಪ್ರಿಯ ಅಭಿವ್ಯಕ್ತಿ. ೧೯ನೇ ಶತಮಾನದಲ್ಲಿಯೇ ಹುಟ್ಟು ಪಡೆದ ಈ ಪ್ರಾಕಾರ ಎಪ್ಪತ್ತರ ದಶಕದಲ್ಲಿ ಉತ್ತುಂಗಕ್ಕೆ ಏರಿದ್ದೊಂದೇ ಅಲ್ಲ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರುವಷ್ಟರ ಮಟ್ಟಕ್ಕೆ ಬೆಳೆದಿತ್ತು ಎಂಬ ಉಲ್ಲೇಖಗಳಿವೆ. ಈಗಲೂ ಇದು ಸಾಕಷ್ಟು ಸತ್ವವನ್ನು ಉಳಿಸಿಕೊಂಡಿದೆ ಅಲ್ಲಿ.
ನಗೆಗಾರರಿಗೂ ಸುದ್ದಿಗಾರರಿಗೂ ಒಂದು ಸಾಮ್ಯವಿದೆ. ನಿತ್ಯವೂ ನೂತನವಾದ್ದನ್ನು ಹುಡುಕಬೇಕು. ಸುದ್ದಿ ಓದಿದ ಮರುಕ್ಷಣದಲ್ಲಿ ಹಳತಾಗಿಬಿಡುತ್ತದೆ. ಜೋಕು ಕೇಳಿದ ತಕ್ಷಣಕ್ಕೆ ಹಳಸಲಾಗಿಬಿಡುತ್ತದೆ. ಕೇಳಿದ ಅಥವಾ ಓದಿದ ಹಾಸ್ಯಗಳೇ ಆದರೂ ಕೆಲವು ಆಗಾಗ ನೆನಪಾಗಿ ಸಟಕ್ಕನೆ ನಗೆ ತರಿಸಿವುದುಂಟು. ತಂತ್ರದ (concept) ಹಿನ್ನೆಲೆಯಿರುವ ಜೋಕುಗಳು ಹೀಗೆ ಮಾಡಬಲ್ಲವು. ಅದ್ಭುತ ಆಂಗಿಕ ಅಭಿನಯವುಳ್ಳ ಹಾಸ್ಯಗಳಿಗೂ ನಿರಂತರ ಗಟ್ಟಿತನವಿರುತ್ತದೆ. ಮಿ.ಬೀನ್ ಇದಕ್ಕೆ ಒಳ್ಳೆಯ ಉದಾಹರಣೆ. ಬೀಚಿ ಸೋಮಾರಿ ರಾಜ್ಯವೊಂದರ ವರ್ಣನೆ ಮಾಡುತ್ತಾ, ''ಆ ರಾಜ್ಯದಲ್ಲಿ ಗಿಡದಲ್ಲಿ ಸುಲಿದ ಬಾಳೆ ಹಣ್ಣೇ ಬೆಳೆಯುತ್ತಿತ್ತು.” ಎಂದು ಬರೆದರು. ಇಂತಹ ಹಾಸ್ಯಕ್ಕೆ ಭಾಷೆಯ ಹಂಗಿಲ್ಲ ನೋಡಿ. ಸಸ್ಯ ವಿಜ್ಞಾನಿಗಳು ಇದನ್ನು (ಸುಲಿದ ಬಾಳೆಹಣ್ಣಿನ ಗಿಡ) ನಿಜವಾಗಿಸುವವರೆಗೂ ಈ ಹಾಸ್ಯ ಹಸಿರಾಗಿಯೇ ಇರುತ್ತದೆ. ಭಾಷೆಯ ಚಳಕದಿಂದ, ಪ್ರಾಸಗಳಿಂದ ಜನಿತವಾಗುವ ಹಾಸ್ಯಗಳ ವ್ಯಾಪ್ತಿ ಚಿಕ್ಕದು. ಹಾಗೆ ನೋಡಿದರೆ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯವಾದ ಯಕ್ಷಗಾನದಲ್ಲಿ ಉತ್ತಮ ದರ್ಜೆಯ ಹಾಸ್ಯಗಳು ಸೃಷ್ಟಿಯಾಗುತ್ತವೆ. ಮತ್ತು ಅವು ಆಶುಹಾಸ್ಯಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಇವರ ಮಿತಿಗಳೇನೆಂದರೆ ಅವರು ಹೇಳುವ ಹಾಸ್ಯದ ಮಾತುಗಳು (ಬಹುಪಾಲು) ಅತಿ ಪ್ರಾದೇಶಿಕವಾದವುಗಳು. ಕಲಾವಿದರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಸಂಗತಿಗಳನ್ನು ಪ್ರಸಂಗಕ್ಕೆ ಧಕ್ಕೆಯಾಗದಂತೆ ಜಾಣ್ಮೆಯಿಂದ ಹಾಸ್ಯಕ್ಕೆ ಇಳಿಸುವ ವಿದೂಷಕರು ಕರತಾಡನ ಗಿಟ್ಟಿಸುತ್ತಾರಾದರೂ ಸಮಸ್ತ ಜನತೆಗೆ ತಲುಪಲಾರದ ಕೊರತೆ ಎದ್ದು ಕಾಣುತ್ತದೆ.
ನಗೆಗಾರನೇ (ಸ್ಟಾಂಡ್ ಅಪ್ ಕಾಮಿಡಿಯನ್) ಹಾಸ್ಯಗಳನ್ನು ಸೃಷ್ಟಿಸುವ ಸೃಜನಶೀಲನಾಗಿದ್ದರೆ ಆತನ ಭವಿಷ್ಯ ದೀರ್ಘವಾಗಿರುತ್ತದೆ. ಬೇರೆಯವರು ಬರೆದಿದ್ದನ್ನು ಹೇಳುವ ಹಾಸ್ಯ ಹಾಸ್ಯವೇ ಆಗಿದ್ದರೂ ಅದರ ಖಜಾನೆಗೆ ಮಿತಿಗಳಿವೆ. ಮತ್ತು ಮೊದಲೇ ಓದಿದ, ಕೇಳಿದ ಪ್ರೇಕ್ಷಕನಿಗೆ ಅದು ಅತೀವ ಕಿರಿಕಿರಿಯನ್ನುಂಟುಮಾಡುತ್ತದೆ. ಹೀಗಾದಾಗಲೇ ನಗೆಗಾರರು ನಗೆಪಾಟಲಿಗೆ ಒಳಗಾಗತೊಡಗುತ್ತಾರೆ. ಜನಾಕರ್ಷಣೆ ಕಡಿಮೆ ಆಗತೊಡಗುತ್ತದೆ. ಹಾಸ್ಯೋತ್ಸವಗಳು, ‘ಇಲ್ಲಿ ಕುಳಿತಿರುವುದೇ ಅಲ್ಲಿ ಕುಳಿತರಾಯಿತೆಂಬ’(ಬೀಚಿ ಉವಾಚ) ಧೋರಣೆಯ ಜನಕ್ಕೆ ಸೀಮಿತವಾಗುತ್ತವೆ. ಪಾಶ್ಚಾತ್ಯ ನಗೆಗಾರರು ಸರಕು ಮುಗಿದಾಗ ಕ್ಲಬ್ಬುಗಳಲ್ಲಿ ಅಶ್ಲೀಲ ಜೋಕುಗಳನ್ನು ಹೇಳಿಕೊಂಡಾದರೂ ಬದುಕುವ ಅವಕಾಶಗಳಿವೆ. ಹಾಸ್ಯದ ಸೃಷ್ಟಿಗೆ ಅತಿ ಅಗ್ಗದ ಸಾಧನವೇ ಅಶ್ಲೀಲತೆ. ನಮ್ಮಲ್ಲಿ ಅದರ ಸಾಧ್ಯತೆಗಳು ಕಡಿಮೆಯಾದ್ದರಿಂದ ನಮ್ಮ ನಗೆಗಾರರು ಒಂದು ಹಂತಕ್ಕೆ ತಲುಪಿ ದಿಕ್ಕುಗಾಣದೇ ನಿಂತುಬಿಡುತ್ತಾರೆ. ಪ್ರಾಣೇಶರು ಮತ್ತು ಕೃಷ್ಣೇ ಗೌಡರು ಈ ಪ್ರಾಕಾರಕ್ಕೆ ತಕ್ಕಮಟ್ಟಿಗಿನ ನ್ಯಾಯ ಒದಗಿಸುತ್ತಾರಾದರೂ ಏಕತಾನದಿಂದ ಹೊರಬರುವುದಕ್ಕೆ ಸಾಧ್ಯವಾಗಿಲ್ಲ. ದಯಾನಂದರು ಮಿಮಿಕ್ರಿಗೆ ಸೀಮಿತವಾಗುತ್ತಾರೆ. ಇದು ಇವರುಗಳ ಬಗೆಗಿನ ಪುಕಾರಲ್ಲ. ದಿನ ನಿತ್ಯ ಹೊಸದನ್ನು ತರುವುದು ಸುಲಭವಲ್ಲ ಎಂಬುದನ್ನು ಯಾರೂ ಒಪ್ಪಿಕೊಳ್ಳಬೇಕಾದದ್ದೇ.
ಭಾರತೀಯ ಸ್ಟಾಂಡ್ ಅಪ್ ಕಾಮಿಡಿಯ ಬಗ್ಗೆ ಹೇಳುವಾಗ ರಾಜು ಶ್ರೀವಾಸ್ತವ್ ರನ್ನು ಪ್ರಸ್ತಾಪಿಸಲೇಬೇಕಾಗುತ್ತದೆ. ಬಾಲಿವುಡ್ ಸಿನಿಮಾಗಳಲ್ಲಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈತನ ಅಗಾಧ ಹಾಸ್ಯಪ್ರಜ್ಞೆ ಮತ್ತು ಪ್ರತಿಭೆ ಬೆಳಕಿಗೆ ಬಂದಿದ್ದು ‘ಲಾಫ್ಟರ್ ಚಾಲೆಂಜ್’ ಎಂಬ ಎಪಿಸೋಡುಗಳ ಮೂಲಕ. ಇವರ ಬಗ್ಗೆ ನಾನು ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ. ಹಿಂದಿ ಬಲ್ಲ ಎಲ್ಲ ಭಾಷೆಯ ಟೀವಿ ವೀಕ್ಷಕರು ಇವರ ಹಾಸ್ಯವನ್ನು ನೋಡಿರುತ್ತಾರೆ. ಆತ ಬದುಕನ್ನು ಅರ್ಥ ಮಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಆತನ ಪ್ರೆಸೆಂಟೇಶನ್ ಸ್ಕಿಲ್ ಸಾಟಿ ಇಲ್ಲದ್ದು. ಅವರ ಹಾಸ್ಯಗಳನ್ನು ನೋಡುತ್ತಿದ್ದರೆ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ದಂಧೆಯ ಜನ ತಮ್ಮ ಸುತ್ತಲಿನ ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳನ್ನು ನಿರಂತರ ಗಮನಿಸುತ್ತಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇಂತಹ ಮಾಹಿತಿಗಳನ್ನು ತುರ್ತಾಗಿ ತಮ್ಮ ಸರಕಾಗಿ ಮಾರ್ಪಡಿಸಿಕೊಳ್ಳುವ ಕಲೆಗಾರಿಕೆ, ಬೇಕಾಗುತ್ತದೆ. ಮುಂಬೈ ಲೋಕಲ್ ರೈಲುಗಳ ಬಗ್ಗೆ ತುಂಬ ಪರಿಣಾಮಕಾರಿಯಾಗಿ ಮಾತನಾಡುವ ರಾಜು ಖಾಲಿ ಬೋಗಿಗಳಲ್ಲಿ ಮೇಲಿನ ಹಿಡಿಕೆಗಳ ತೊನೆದಾಟದಿಂದ ಹಿಡಿದು ಸಣ್ಣ ಸಣ್ಣ ವಿವರಗಳನ್ನು ತೋರಿಸುವದನ್ನು ನೋಡಿಯೇ ಅನುಭವಿಸಬೇಕು. ನೇತಾಗಳನ್ನು ಹಂಗಿಸುವುದರಲ್ಲಿ ನಿಸ್ಸೀಮರು ರಾಜು. ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ತಂದೆಯೊಬ್ಬನ ತಳಮಳಗಳನ್ನು ತುಂಬಾ ನವಿರಾಗಿ ಚಿತ್ರಿಸುತ್ತಾ ಒಂದು ಹಂತದಲ್ಲಿ ನಮ್ಮ ಕಣ್ಣುಗಳನ್ನೂ ತೇವಗೊಳಿಸಿಬಿಡುತ್ತಾರೆ. ಘಟನೆಯ ಪಾತ್ರಗಳ ಭಾವದ ಜೊತೆ ನಿರ್ಜೀವ ವಸ್ತುಗಳಿಗೂ ಸಂವೇದನೆಗಳಿವೆಯೇನೋ ಎಂಬಂತೆ ಅಭಿವ್ಯಕ್ತಿಸುವ ರಾಜು ನಮ್ಮ ಜಯಂತ ಕಾಯ್ಕಿಣಿಯವರ ಬರಹಗಳನ್ನು ನೆನಪಿಗೆ ತರುತ್ತಾರೆ. ಒಂದುಸಲ ನೋಡಿಬಿಡುವ ಆಸೆಯಾದರೆ, ನಿಮಗೆ ಹಿಂದಿ ಅರ್ಥವಾಗುತ್ತಿದ್ದರೆ, ಯೂ ಟ್ಯೂಬ್ ನಲ್ಲಿ ‘ರಾಜು ಶ್ರೀವಾಸ್ತವ್’ ಎಂದೊಮ್ಮೆ ಹೊಡೆದು ನೋಡಿ. ನಮ್ಮ ನಗೆಗಾರರು ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ ಅನ್ನಿಸೀತು. ಸ್ಯಾಂಪಲ್ಲಿಗೆ ಕೆಳಗಡೆ ಲಿಂಕ್ ಕ್ಲಿಕ್ ಮಾಡಿ ನೋಡಿ.
http://uk.youtube.com/watch?v=5e6-PRoOhV8
ಕೊನೆಯ ಮಾತು. ನಮ್ಮಲ್ಲಿ ಹಾಸ್ಯಪ್ರಜ್ಞೆ ಎಂಬುದು ಮೊದಲಿಗಿಂತ ಬೆಳೆದಿದೆಯೋ, ಅಳಿದಿದೆಯೋ ಎನ್ನುವುದು ಪ್ರತ್ಯೇಕ ಚರ್ಚೆಯಾಗಬಲ್ಲ ವಸ್ತು. ಆದರೆ ಹಾಸ್ಯವನ್ನು ಸ್ವೀಕರಿಸುವ ಪ್ರೇಕ್ಷಕನಲ್ಲಂತೂ ಗಣನೀಯ ಬದಲಾವಣೆಗಳಾಗಿವೆ. ಹಳೇ ರಾಜ್ ಕುಮಾರ್ ಚಿತ್ರಗಳಲ್ಲಿನ ನರಸಿಂಹರಾಜು ಹಾಸ್ಯ ವರ್ತಮಾನದ ಪ್ರೇಕ್ಷಕನಿಗೆ ಅಷ್ಟಾಗಿ ಒಗ್ಗದಿರುವುದು ಪ್ರೇಕ್ಷಕನ ನಿರೀಕ್ಷೆಗಳಲ್ಲಾದ ಬದಲಾವಣೆಗಳನ್ನು ತೋರಿಸುತ್ತದೆ.
ಕನ್ನಡದಲ್ಲಿ ಇವತ್ತು ನಿಂತು ನಗಿಸುವುದರಲ್ಲಿ ಶ್ರೇಷ್ಠರು ಇದ್ದಾರಾದರೆ ಅದು ಮಾಸ್ಟರ್ ಹಿರಣ್ಣಯ್ಯನವರೇ. ಆದರೆ ಅವರನ್ನು ಈ ಪ್ರಾಕಾರಕ್ಕೆ ಪೂರ್ತಿ ಸೇರಿಸಲಾಗುವುದಿಲ್ಲ. ಅವರ ವ್ಯಾಪ್ತಿ ಅದಕ್ಕಿಂತಲೂ ದೊಡ್ಡದು.
-ಚಿನ್ಮಯ.

Saturday, October 11, 2008

ಗೊಂದಲವೆಂಬ ಗೊಂಡಾರಣ್ಯದಲ್ಲಿ...

ಯಾವ ಪಕ್ಷ, ಸಂಘಟನೆಗಳಿಗೂ ಸೇರಿರದ, ಸೆಕ್ಯುಲರ್, ಪೆಕ್ಯುಲಿಯರ್ ಇದ್ಯಾವುದೂ ಅಲ್ಲದ ಪ್ರಜೆ ಎಂಬುವನಿದ್ದಾನಲ್ಲ. ನನ್ನಂತವನು, ನಿಮ್ಮಂತವನು..ಇವನ ನಿಲುವೇನು ಇವತ್ತಿನ ದಿನಗಳಲ್ಲಿ? ಹೋದ ತಿಂಗಳು ಟೀವಿ ಧಾರವಾಹಿಗಳಿಗಿಂತ ಕರಾರುವಾಕ್ಕಾಗಿ ಬಾಂಬ್ ಸ್ಫೋಟಗಳಾದವು, ನೂರಾರು ಜನರು ಜೀವ ಕಳೆದುಕೊಂಡರು. ಚರ್ಚ್ ಗಳ ಮೇಲೆ ಧಾಳಿ ನಡೆದವು. ಓರಿಸ್ಸಾದಲ್ಲಿ ನನ್ ಒಬ್ಬರ ಮೇಲೆ ಅತ್ಯಾಚಾರದಂತಹ ಅಮಾನುಷ ಕೃತ್ಯಗಳಾದವು. ಇಂತ ಘಟನೆಗಳು ನೆಡೆದಾಗ ಟಿವಿ ಚಾನೆಲ್ಲುಗಳಿಗೆ, ಪತ್ರಿಕೆಗಳಿಗೆ, ರಾಜಕಾರಣಿಗಳಿಗೆ, ಧರ್ಮಕಾರಣಿಗಳಿಗೆ ಪೂರ್ಣಾವಧಿ ಕೆಲಸವಿರುತ್ತದೆ. ಬುದ್ಧಿಕಾರಣಿಗಳು ಇತ್ತೀಚಿನ ಸೇರ್ಪಡೆ. ನಮ್ಮದೇನಿದ್ದರೂ ಗೊಣಗಾಟ.
ರಕ್ತಸಿಕ್ತರನ್ನೂ ಬಿಡದೇ ಮೈಕಿನ ಕೋಲನ್ನು ಮೂತಿಗೆ ಹಿಡಿದುಬಿಡುವ ಸುದ್ಧಿ ಮಾಧ್ಯಮಗಳು ಘಟನೆಗಳನ್ನು ಇನ್ನೂಬೀಭತ್ಸವನ್ನಾಗಿ ಮಾಡಿಬಿಡುತ್ತವೆ. ಬುದ್ಧಿ ಜೀವಿಗಳು ಯಥಾಪ್ರಕಾರ ಶಾಂತಿಯ ಮಂತ್ರವನ್ನು ಪಠಿಸಿ ಸುಮ್ಮನಾಗುತ್ತಾರೆ. ಹೀಗಿರುವಾಗ ಶ್ರೀಸಾಮಾನ್ಯನ ನಿಲುವು ಏನೆಂಬುದು ಗೊತ್ತಾಗುವದೇ ಇಲ್ಲ. ಏಕೆಂದರೆ ಯಾರೂ ಅವನನ್ನು ಸಂದರ್ಶಿಸುವುದಿಲ್ಲ.
ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ಹಲವರಿಗೆ ತಮ್ಮ ನಿಲುವನ್ನು ಹೇಳಿಕೊಳ್ಳಲು ಅಡ್ಡಿ ಏನೆಂದರೆ ಬ್ರಾಂಡ್ ಆಗಿಬಿಡುವ ಭಯ. ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸಿದಿರೋ ನಿಮ್ಮನ್ನು ನೀವು ’ಬುದ್ಧಿಜೀವಿಗಳು’ ಎಂದು ಕರೆಸಿಕೊಳ್ಳುವ ಅಪಾಯವಿದೆ. ಹಿಂದುತ್ವದ ಹಿಂದೆ ಬಿದ್ದಿರೋ ನಿಮ್ಮನ್ನು ‘ಚೆಡ್ಡಿ ಜೀವಿಗಳು’ ಎಂದುಬಿಡುತ್ತಾರೆ. ಈಗಿನ ಹೊಸ ವ್ಯಾಖ್ಯಾನವೇನೆಂದರೆ. ಕೇವಲ ಹಿಂದೂಗಳ ಹಿತ ಕಾಯುವ ಸಮೂಹವನ್ನು ಕೋಮುವಾದಿಗಳೆಂದೂ, ಗಲಭೆಯಾದ ತಕ್ಷಣ ಗಡಬಡಿಸಿ ಎದ್ದು ಬುದ್ಧಿ ಹೇಳಲು ಬರುವವರನ್ನು ಬುದ್ಧಿವಾದಿಗಳೆಂದೂ, ಗಲಭೆಯಾಗಲಿ, ಬೇಕಾದ್ದಿರಲಿ ತಮಗೇನಾದರೂ ಸಿಗುತ್ತದೆಯೋ ಎಂದು ಸದಾ ಹೊಂಚು ಹಾಕಿ ಕುಳಿತಿರುವ ರಾಜಕಾರಣಿಗಳ ಸಮೂಹವನ್ನು ಅವಕಾಶವಾದಿಗಳೆಂದೂ ಕರೆಯಬಹುದಾಗಿದೆ
ಮೇಲೆ ಹೇಳಿದ ವಾದಿಗಳೆಲ್ಲ ಸೇರಿ ಸಾಮಾನ್ಯನಿಗೆ ಒಂದು ನಿಲುವನ್ನು ಸ್ಥಾಪಿಸಿಕೊಳ್ಳಲು ಸಾಧ್ಯವೇ ಆಗದ ಒಂದು ನಿರಂತರ ಗೊಂದಲದ ಸ್ಥಿತಿಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿವೆ. ಮಾಧ್ಯಮಗಳ ಪಾತ್ರವೂ ಬಹಳ ದೊಡ್ಡದು ಇದರಲ್ಲಿ. ನೋಡಿ, ನಮ್ಮಲ್ಲಿ ಎಲ್ಲವಕ್ಕೂ ಒಂದು ನಿರಾಕರಣವಿದೆ. ಮೊನ್ನೆ ದೆಹಲಿಯಲ್ಲಿ ಭಯೋತ್ಪಾದಕರು ಎನಿಸಿಕೊಂಡವರ ಪೊಲೀಸ್ ಎನ್ ಕೌಂಟರ್ ನೆಡೆಯಿತಲ್ಲ. ಒಬ್ಬ ಅತ್ಯಂತ ದಕ್ಷ ಅಧಿಕಾರಿಯೂ ಗುಂಡೇಟಿನಿಂದ ಸತ್ತರು. ಬದುಕುಳಿದ ಒಬ್ಬಿಬ್ಬರನ್ನು ಹಿಡಿದು ತಂದಿದ್ದು ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ಮರುದಿನವೇ ಇನ್ನೊಂದು ವರದಿ ಪ್ರಕಟವಾಗಿಬಿಡುತ್ತದೆ. ಪೊಲೀಸರು ಒತ್ತಡ ಹೆಚ್ಚಾದಾಗ ಕೆಲವು ಪಾಪದ ಸಾಬರ ಹುಡುಗರನ್ನು ಹಿಡಿದು ಮುಖಕ್ಕೆ ಕರಿಮುಸುಕು ತೊಡಿಸಿದ್ದಾರೆಂಬ ಆರೋಪವಿರುತ್ತದೆ. ಮಾನವ ಹಕ್ಕುಗಳ ಸದಸ್ಯರು ತಗಾದೆ ತೆಗೆಯುತ್ತಾರೆ. ನಮಗೂ ಇದ್ದಿರಬಹುದೇ ಎಂಬ ಆತಂಕ ಹುಟ್ಟಿಬಿಡುತ್ತದೆ. ದೂರದ ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾಲಬುಡದ ಕರಾವಳಿಯಲ್ಲಿಯೇ ಬಂಧನಗಳು ನಡೆದಾಗ, ಕಣ್ಣಿಗೆ ಕಾಣುವ ಮೀಸೆ ಇಲ್ಲದ ಗಡ್ಡಧಾರಿಗಳೆಲ್ಲ ಭಯೋತ್ಪಾದಕರಂತೆ ಕಂಡುಬಿಡುತ್ತಾರೆ. ಊರಿನ ತುದಿಗೆ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವ, ಸೈಕಲ್ ರಿಪೇರಿಯ ನಿರುಪದ್ರವಿ ಬಡ ಸಾಯ್ಬ ಭಟ್ಕಳಕ್ಕೆ ಹೋಗುವುದು ಹಾಗಿರಲಿ,ಭಟ್ಕಳ ಬೋರ್ಡ್ ಇರುವ ಬಸ್ಸಿನಿಂದ ಇಳಿದರೂ ಎಂಥೆಂತದೋ ಅನುಮಾನ ಹುಟ್ಟಿಬಿಟ್ಟಾಗ ನಮ್ಮ ಯೋಚನಾ ಕ್ರಮದ ಬಗ್ಗೆ ನಾಚಿಕೆಯಾಗಿಬಿಡುತ್ತದೆ. ಆದರೆ ಇವೆಲ್ಲ ನಮ್ಮ ಗೊಂದಲಗಳ ಫಲಗಳೆಂದೇ ನನ್ನ ಅನಿಸಿಕೆ.
ನಾನಾವತಿ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿದಾಗ ಪಾಪ, ಮೋದಿ ಮುಗ್ಧ ಇದೆಲ್ಲ ಕಾಂಗ್ರೆಸ್ಸಿಗರ ಪಿತೂರಿ ಎಂದು ಮರುಗಿದೆವು ನಾವು – ನನ್ನಂತವರು. ಬೆನ್ನಲ್ಲೇ ಬಂತಲ್ಲ ಮತ್ತೊಂದು ವರದಿ. ಮೋದಿ ನಾನವತಿಯನ್ನು ಹೊಂದಿಸಿಕೊಡಿದ್ದಾರೆಂದು ತೆಹಲ್ಕಾ ಹೇಳಿಕೊಂಡಿತು. ”ನಾನಾವತಿ ಹಮಾರಾ ಆದ್ಮಿ ಹೈ, ಹಮ್ ಉನ್ ಕೊ ಫಿಟ್ ಕರ್ಲೇಂಗೆ” ಎಂದು ಬಿಜೆಪಿಯ ಎಮ್ಮೆಲ್ಲೆಯೊಬ್ಬ ಹೇಳಿದ್ದು ನಮ್ಮ ಕ್ಯಾಮರಾದಲ್ಲಿದೆ ಎಂದಳು ತೆಹಲ್ಕಾ ಪತ್ರಕರ್ತೆ. ಹೇಳಿ ಯಾವುದು ಸತ್ಯ ಯಾವುದು ಸುಳ್ಳು.
ಇಂತಹ ನಿರಾಕರಣಗಳು ಹಿಂದೆ ಇರಲಿಲ್ಲವೆಂದಲ್ಲ. ಜಗತ್ತಿನ ಎಲ್ಲೆಡೆಯಲ್ಲೂ ಇವೆ. ಆದರೆ ಬಹು ಪ್ರಮುಖ ಘಟನೆಗಳಿಗೆ, ವ್ಯಕ್ತಿತ್ವಗಳಿಗೆ ಸಂಬಂಧಪಟ್ಟಂತೆ ನಿರಾಕರಣಗಳಿವೆ. ಹಿಟ್ಲರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದ ಇವುಗಳಲ್ಲಿ ಪ್ರಮುಖವಾದದ್ದು. ತಾಜ್ ಮಹಲ್ ಕಟ್ಟಿಸಿದ್ದು ಷಹಜಹಾನ್ ಅಲ್ಲವೇ ಅಲ್ಲ ಎಂಬ ವಾದವೂ ಈ ಗುಂಪಿಗೆ ಸೇರುತ್ತದೆ. ಈಗ ಹಾಗಿಲ್ಲ. ನಮ್ಮ ಸುತ್ತಲಿನ ಯಾವುದೇ ಕ್ಷುಲ್ಲಕ ಘಟನೆಗೂ ಒಂದು ನಿರಾಕರಣವುಂಟು. ಮತ್ತು ಇವೇ ನಮ್ಮನ್ನು ಸದಾ ಗೊಂದಲದಲ್ಲಿರುವಂತೆ ಮಾಡುತ್ತವೆ. ನಮಗೆ ತಿಳಿದಿರುವುದು ಸತ್ಯವೆಂದು ಭಾವಿಸಿ ಕುಳಿತುಕೊಳ್ಳುವ ಹಾಗಿಲ್ಲ.
ಮೊನ್ನೆ ಎನ್ ಡಿ ಟಿವಿಯಲ್ಲಿ, ಓರಿಸ್ಸಾದಲ್ಲಿ ನೆಡೆದ ಕ್ರೈಸ್ತರ ಮೇಲಿನ ದೌರ್ಜನ್ಯದ ಕುರಿತಾದ ಚರ್ಚೆಯೊಂದನ್ನು ವೀಕ್ಷಿಸುತ್ತಿದ್ದೆ. ಹಿಂದೂ ಜಾಗರಣ ವೇದಿಕೆಯ ಪ್ರತಿನಿಧಿಯೊಬ್ಬರು ಇಂತಹ ಘಟನೆಗಳ ಹಿಂದೆ ಮತಾಂತರದ ಪಾತ್ರ ಬಹಳ ದೊಡ್ಡದಿದೆ ಎಂಬುದನ್ನು ಮಂಡಿಸಿದರು. ಮಂಗಳೂರಿನ ಸುತ್ತಮುತ್ತ ಕ್ರೈಸ್ತ ಮತಾಂತರ ಹೇಗೆ ವ್ಯವಸ್ಥಿತವಾಗಿ ನೆಡೆಯುತ್ತಿದೆಯೆಂದು ವಿಶದವಾಗಿ ವಿವರಿಸಿದರು. ಕ್ರೈಸ್ತ ಪ್ರತಿನಿಧಿ ಅದಕ್ಕೆ ಉತ್ತರವಾಗಿ ಹೇಳಿದರು. “ನಾವು ಯಾರನ್ನು ಮತಾಂತರ ಮಾಡುತ್ತಿದ್ದೇವೆಂದು ಗಮನಿಸಿ, ನಿಮ್ಮ ಧರ್ಮ ಅವರನ್ನು ಸೂಕ್ತವಾಗಿ ನೆಡೆಸಿಕೊಂಡಿಲ್ಲ. ಅವರಿಗೆ ನಾವು ಬದುಕು ಕೊಡುತ್ತಿದ್ದೇವೆ.” ಎಂದರು. ಹಾಗೆಯೇ ಮುಂದುವರಿದು, “ಅದಿರಲಿ, ನಮ್ಮಲ್ಲಿ ಅದಕ್ಕೆ ಅವಕಾಶವಾದರೂ ಇದೆ, ನನ್ನನ್ನು ನೀವು ಹಿಂದೂ ಧರ್ಮಕ್ಕೆ ಮತಾಂತರಿಸಿಕೊಳ್ಳುತ್ತೀರೋ?“ ಎಂದು ಪ್ರಶ್ನಿಸಿದರು.
“ಅವಶ್ಯ ಬನ್ನಿ, ನಿಮಗೆ ಸ್ವಾಗತ” ಎಂದರು ಇವರು.
ಅವರ ತತ್ತಕ್ಷಣದ ಪ್ರಶ್ನೆಯೇನು ಗೊತ್ತೇ? “ನನ್ನನ್ನು ನೇರವಾಗಿ ಬ್ರಾಹ್ಮಣನನ್ನಾಗಿ ಮಾಡಿಕೊಳ್ಳುತ್ತೀರೋ?”
“ನೀವು ನಿಮಗೆ ಬೇಕಾದ ಜಾತಿಯನ್ನು ಆಯ್ದುಕೊಳ್ಳಬಹುದು” ಎಂದರು ಜಾಗರಣ ವೇದಿಕೆಯವರು.
ನನಗೆ ಇಲ್ಲಿ ಎರಡು ಸಂಗತಿಗಳು ಕಾಣುತ್ತವೆ. ಪ್ರಶ್ನಿಸುವ ಅವರಿಗೂ, ಉತ್ತರಿಸುವ ಇವರಿಗೂ ಮತ್ತು ನಮಗೂ ಗೊತ್ತು. ಮೇಲಿನ ಹೇಳಿಕೆಗಳು ಎಂದಿಗೂ ಕಾರ್ಯ ರೂಪಕ್ಕೆ ಬರಲಾರವು. ಈ ಪ್ರಶ್ನೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಬುಡಕ್ಕೆ ನಮ್ಮನ್ನು ಕೊಂಡೊಯ್ದು ನಿಲ್ಲಿಸುತ್ತದೆ. ಮತ್ತು ಮುಂದದು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಜಾತಿ ಬೇರುಗಳು ಎಷ್ಟು ಆಳಕ್ಕೆ ಇಳಿದುಬಿಟ್ಟಿವೆಯೆಂದರೆ, ಕ್ರೈಸ್ತರ ಆಮಿಷಗಳಿಗೆ ಒಲಿದು ಹಿಂದೂ ಸಮೂಹದ ಎಲ್ಲ ಜಾತಿಗಳಿಂದ ಒಂದಿಷ್ಟು ಮತಾಂತರವಾಗಿಬಿಟ್ಟಿದ್ದರೆ ಕಾಲಕ್ರಮೇಣ ಬ್ರಾಹ್ಮಣ ಕ್ರೈಸ್ತರು, ವಕ್ಕಲಿಗ ಕ್ರೈಸ್ತರು, ಕುರುಬ ಕ್ರೈಸ್ತರು ಇತ್ಯಾದಿಗಳೆಲ್ಲ ಹುಟ್ಟಿಕೊಂಡಿರುತ್ತಿದ್ದವು.

ಎರಡನೆಯದು, ಹಿಂದೂಗಳಲ್ಲಿ ಕೆಳ ಜಾತಿಯವರ ಬದುಕು ದುಸ್ತರವೆಂಬುದು ಎಷ್ಟು ನಿಜವೋ, ಕ್ರೈಸ್ತ ಧರ್ಮ ಮತಾಂತರಗೊಂಡವರ ಬದುಕನ್ನು ಹಸನಾಗಿಸುತ್ತದೆ ಎಂಬುದು ಒಂದು ಭ್ರಮೆಯೇ. ಕ್ರೈಸ್ತ ಧರ್ಮ ಮತಾಂತರಗೊಂಡವರಿಗೆ ಒಂದು ಅನನ್ಯತೆಯ ಗೌರವವನ್ನು ತಂದು ಕೊಡುತ್ತದೆ ಎಂದು ಅನಂತ ಮೂರ್ತಿಗಳು ಯಾವ ಅರ್ಥದಲ್ಲಿ ಹೇಳಿದರೋ ತಿಳಿಯೆ.

ನಿರಾಕರಣದ ಬಗ್ಗೆ ಹೇಳುವಾಗ ಸಮರ್ಥನೆಯ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ.
ಮುಸ್ಲಿಂ ಜಗತ್ತಿಗೆ ಅದರದ್ದೇ ಆದ ಸಮರ್ಥನೆ ಇರುತ್ತದೆ. ನಮ್ಮನ್ನು ಮುಖ್ಯವಾಹಿನಿಯಲ್ಲಿ ಯಾವತ್ತೂ ಪರಿಗಣಿಸಲಿಲ್ಲ. ನಿಮ್ಮ ಕಾಲನಿಗಳಲ್ಲಿ ನಮಗೆ ಮನೆ ಕೊಡಲಾರಿರಿ, ನಿಮ್ಮ ಕಂಪನಿಗಳಲ್ಲಿ ಕೆಲಸ ಕೊಡಲಾರಿರಿ. ಗುಜರಾತಿನಲ್ಲಾದ ಮುಸ್ಲಿಮರ ಕಗ್ಗೊಲೆಯಿಂದ ನೊಂದ ಕೆಲವರು ಭಯೋತ್ಪಾದಕರಾಗಿರಬಹುದು. ಇತ್ಯಾದಿ..ಇತ್ಯಾದಿ.
ನೀವು ದಿನ ಬೆಳಗಾದರೆ ಸಿಕ್ಕ ಸಿಕ್ಕಲ್ಲಿ ಬಾಂಬ್ ಸ್ಫೋಟಿಸುತ್ತಿದ್ದರೆ ನಿಮ್ಮನ್ನು ಹತ್ತಿರ ಸೇರಿಸುವುದಾದರೂ ಹೇಗೆ? ಎಂಬುದು ಇನ್ನೊಂದು ಸಮೂಹದ ವಾದ. ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪ್ರಶ್ನೆಯಷ್ಟೇ ಗೊಂದಲಕಾರಿಯಾದದ್ದು ಇದು.
ಎತ್ತ ಸಾಗುತ್ತಿದ್ದೇವೆ ನಾವು?
-ಚಿನ್ಮಯ.

Sunday, October 5, 2008

ಟಾಟಾ ನ್ಯಾನೊ ಮತ್ತು ನಮ್ಮ ವಿಜ್ಞಾನ, ತಂತ್ರಜ್ಞಾನ

“ಶಾಂತಿಯ ಬಗ್ಗೆ ಚರ್ಚಿಸುವಾಗ ಗಾಂಧಿ ಎಂಬ ಹೆಸರನ್ನು ಉಪೇಕ್ಷಿಸಿದಿರಾದರೆ ಅದು ನಿಮ್ಮ ಸ್ವಂತ ರಿಸ್ಕು” ಹೀಗೆ ಹೇಳಿದವರು ಖ್ಯಾತ ಸಮಾಜ ಸುಧಾರಕ ಮಾರ್ಟಿನ್ ಲೂಥರ್ ಕಿಂಗ್.
ಟಾಟಾ ಕುರಿತು ಇಂತಹುದೇ ಒಂದು ಪ್ರಮೇಯ ಈಗ ಜಾಗತಿಕ ಮಟ್ಟದ ಕಾರು ತಯಾರಿಕರಿಗೆ ಮತ್ತು ಪೂರೈಕೆದಾರ ಸಂಸ್ಥೆಗಳಿಗೆ ಒದಗಿಬಂದಿದೆ. ಈಗ ಇವರ್ಯಾರೂ ಟಾಟಾ ಸಂಸ್ಥೆಯನ್ನು ಉಪೇಕ್ಷಿಸುವಂತಿಲ್ಲ. ಉಪೇಕ್ಷಿಸಿದರೆ ಅವರಿಗೇ ಹಾನಿ. ಕಾರು ತಯಾರಿಕರಿಗೆ ಟಾಟಾ ಒಂದು ಸವಾಲಾದರೆ, ಪೂರೈಕೆದಾರರಿಗೆ (ಸಪ್ಲಾಯರ್ಸ್) ಟಾಟಾ ಹೊಸ ಆಶಾಕಿರಣ. ತಮ್ಮದೇ ಪ್ರತಿಷ್ಟಿತ ಕಂಪನಿಗಳನ್ನು ಕಬಳಿಸುತ್ತಿರುವ ಟಾಟಾ ಬ್ರಿಟಿಷರಿಗೆ ಈಸ್ಟ್ ಇಂಡಿಯಾ ಕಂಪನಿಯೇ ಹೊಸ ಅಂಗಿ ತೊಟ್ಟು ಬಂದಂತೆ ಗೋಚರಿಸುತ್ತಿದೆ.
ರತನ್ ರ ಕನಸು ನ್ಯಾನೋ ದತ್ತ ಇಡೀ ಜಗತ್ತೇ ಭರವಸೆಯ ಕಣ್ಣುಗಳಿಂದ ನೋಡುತ್ತಿರುವಾಗ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದ ಕಣ್ಣುಗಳಲ್ಲಿ ಆಸೆಯನ್ನೂ ಹೊರಹೊಮ್ಮಿಸಿದೆ. ಸ್ವಯಂವರದಲ್ಲಿ ರತನ್ ಟಾಟಾ ಎಂಬ ಬ್ರಹ್ಮಚಾರಿಯ ಕುವರಿ ನ್ಯಾನೋ ಯಾರನ್ನು ವರಿಸುತ್ತಾಳೆಂಬುದನ್ನು ಕಾದು ನೋಡಬೇಕಾಗಿದೆ. ಕರ್ನಾಟಕ ಮತ್ತು ಆಂಧ್ರ ನಾನೋ ನೀನೋ ಎಂದು ಪೈಪೋಟಿಗೆ ಬಿದ್ದಿವೆ.
ಸುದ್ಧಿವಾಹಿನಿಗಳಲ್ಲಿ ಸದರಿ ಮಾಹಿತಿ ಪ್ರಸಾರವಾದಾಗ ಎಲ್ಲ ಕನ್ನಡಿಗರಂತೆ ನನಗೂ ಸಂತಸವಾಯಿತು. ಅದರಲ್ಲೂ ಧಾರವಾಡದಲ್ಲಿ ಇಂತಹ ಕೈಗಾರಿಕೆಯೊಂದು ಸ್ಥಾಪನೆಯಾಗುತ್ತದೆಯೆಂದರೆ ಬಹಳ ಖುಶಿಯ ಸಂಗತಿ. ಬಹುಕಾಲದಿಂದ ಅಲಕ್ಷಕ್ಕೊಳಗಾಗಿದ್ದ ಉತ್ತರ ಕರ್ನಾಟಕಕ್ಕೆ ಇದೊಂದು ಬಂಪರ್ ಅವಕಾಶವಾಗುವುದರಲ್ಲಿ ಸಂಶಯವಿಲ್ಲ. ಕರ್ನಾಟಕದಲ್ಲಿ ಬೃಹತ್ ಕೈಗಾರಿಕಾ ವಿಕೇಂದ್ರಿಕರಣದ ಮೊದಲ ಹೆಜ್ಜೆಯಾಗಲಿದೆ ಇದು.
ನ್ಯಾನೋಕರ್ನಾಟಕಕ್ಕೆ ಬಂತೆಂದು ಭಾವಿಸೋಣ. (ಇನ್ನೂ ದೇವೆಗೌಡರ ಅಸ್ತ್ರ ಹೊರಬಿದ್ದಿಲ್ಲ. ಅದನ್ನು ದೇವರು ಮಾತ್ರ ಬಲ್ಲ.) ಇದರ ಮೊಟ್ಟ ಮೊದಲ ಫಲಾನುಭವಿಗಳು ರಿಯಲ್ ಎಸ್ಟೇಟ್ ಮಂದಿ. ಇವರಿಗೆ ಮಾಹಿತಿಗಳು ಖಚಿತವಾಗಿರಬೇಕೆಂಬುದೇನಿಲ್ಲ. ವದಂತಿಗಳಿದ್ದರೂ ಸಾಕು. ಇವರು ಆಜನ್ಮ ಪರಾವಲಂಬಿ ಜೀವಿಗಳು. ಅಭಿವ್ರದ್ಧಿ ಸರಕಾರದಿಂದಾಗಲಿ, ಸಂಘ ಸಂಸ್ಥೆಗಳಿಂದಾಗಲಿ, ಅವುಗಳನ್ನೆಲ್ಲ ಜನಕ್ಕೆ ತೋರಿಸಿ ತಮ್ಮ ಅಭಿವೃದ್ಧಿ ಮಾಡಿಕೊಂಬವರು ಇವರು. ಈಗಾಗಲೇ ಧಾರವಾಡದ ಸುತ್ತಮುತ್ತ ಬೆಟ್ಟ ಬಯಲುಗಳೆಲ್ಲ ಭಯಂಕರ ಬೆಲೆ ಪಡೆದುಕೊಂಡಿರಬಹುದು. ಸರಕಾರ ಪ್ರಾರಂಭದಲ್ಲಿಯೇ ಇಂತಹ ಬೆಳವಣಿಗೆಗಳನ್ನು ನಿಯಂತ್ರಿಸಬೇಕಾಗಿದೆ. ನಿವೇಶನಗಳನ್ನು ಮಾರಾಟಕ್ಕೆಂದೇ ಖರೀದಿಸುವವರನ್ನು ಹೇಗಾದರೂ ತಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಧಾರವಾಡದಲ್ಲಿ ಮಿನಿ ಬೆಂಗಳೂರು ಉದಯಿಸಲಿದೆ. ಸಾಮನ್ಯ ಅಂಗಡಿಕಾರರಿಗೆ, ಶಾಲಾ ಮಾಸ್ತರರಿಗೆ, ಮತ್ತು ಇನ್ನಿತರ ಸಣ್ಣ ಪಗಾರದ ಜನರಿಗೆ ಧಾರವಾಡ ತುಟ್ಟಿಯಾಗುವ ಕಾಲ ದೂರವಿಲ್ಲ.
ಮತ್ತೊಂದು ಪ್ರಮುಖ ವಿಷಯವೆಂದರೆ ಉದ್ಯೋಗಾವಕಾಶಗಳು. ಸರಕಾರ ನ್ಯಾನೊದಂತಹ ದೊಡ್ಡ ಉದ್ದಿಮೆಗಳನ್ನು ರಾಜ್ಯಕ್ಕೆ ತರುವಾಗ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆಯ ಕರಾರನ್ನು ಅಳವಡಿಸುವದಕ್ಕೆ ಪ್ರಯತ್ನಿಸಬೇಕು. ಕಸಗುಡಿಸುವವರು ಮತ್ತು ಇತರೇ ಕೆಳಮಟ್ಟದ ಕೆಲಸಗಳಿಗೆ ನಮ್ಮವರು ಮತ್ತು ಅಧಿಕಾರಿ ವರ್ಗ ಮಹಾರಾಷ್ಟದವರು, ಬಂಗಾಳದವರಾದರೆ ಹೆಚ್ಚಿನ ಪ್ರಯೋಜನವಿಲ್ಲ. ಇದು ಭಾಷಾಭಿಮಾನದ ಪರಿಧಿಯನ್ನು ಮೀರಿದ್ದು. ಆದರೆ ಒಂದು ಭೂಭಾಗದ ಜನರ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ. ಧಾರವಾಡದಲ್ಲಿನ ಉದ್ದಿಮೆಯೊಂದರಲ್ಲಿ ದೂರದ ಮಹಾರಾಷ್ಟ್ರದ ಜನತೆ ಬಹು ಸಂಖ್ಯೆಯಲ್ಲಿ ಉದ್ಯೋಗ ಪಡೆದರೆ ಅದು ಸಹಜವಾಗಿ ಸ್ಥಳೀಕರ ಅಸಹನೆಗೆ ಕಾರಣವಾಗುತ್ತದೆ. ಹಾಗೆ ಕೆಲಸ ಮಾಡುವ ಮರಾಠಿಗರು ನಮಗೂ ಮಹಾರಾಷ್ಟ್ರಕ್ಕೂ ಎಂದಿಗೂ ಸೇತುವೆಯಾಗಲಾರರು.
ಹೀಗೆ ಹೇಳುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸ್ಥಳೀಯತೆಯೆಂಬುದೇ ನಮ್ಮ ಪ್ರತಿಭೆ ಮತ್ತು ಅರ್ಹತೆಯಾಗಬಾರದು. ಉದ್ದಿಮೆಗಳು ನಿರ್ದಿಷ್ಟ ಪರಿಣಿತರನ್ನು ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಹೋಗದಂತೆ ಮಾಡಬೇಕಾಗಿದೆ. ಆದರೆ ಅದು ಸಾಕಾರವಾಗುವುದು ಹೇಗೆ? ಇಲ್ಲಿ ಸರಕಾರ, ಕೈಗಾರಿಕೋದ್ಯಮಿಗಳು, ಮತ್ತು ಜನರು ಸಮಾನ ಜವಾಬ್ದಾರರಾಗುತ್ತಾರೆ. ಉದಾಹರಣೆಗೆ, ಧಾರವಾಡದಲ್ಲಿ ನ್ಯಾನೊ ಸ್ಥಾಪನೆಯ ಜೊತೆಯಲ್ಲೇ ಟಾಟಾ ಸ್ಥಳೀಯ ವಿಶ್ವವಿದ್ಯಾಲಯಗಳಲ್ಲಿ ಸರಕಾರದ ಸಹಕಾರದೊಂದಿಗೆ ಸಂಶೋಧನಾ ಘಟಕಗಳನ್ನು ಪ್ರಾರಂಭಿಸಬೇಕು. Automotive manufacturing, Automotive design, Lean manufacturing ಇತ್ಯಾದಿ ಕೋರ್ಸುಗಳನ್ನು ಪ್ರಾರಂಭಿಸಬೇಕು. ಮತ್ತು ಈ ಕೋರ್ಸುಗಳ ಸಿಂಹಪಾಲು ರಾಜ್ಯದ ಜನತೆಗೇ ದಕ್ಕುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ, ವಿದ್ಯಾರ್ಥಿಗಳು ನಿರಂತರ ಮ್ಯಾನುಫಾಕ್ಚರಿಂಗ್ ಪರಿಸರದಲ್ಲಿ ಬೆಳೆಯುವುದರಿಂದ ಹೆಚ್ಚಿನ ಆವಿಷ್ಕಾರಗಳನ್ನು ನಿರೀಕ್ಷಿಸಬಹುದು. ಮೂಲತ: ನಮ್ಮಲ್ಲಿ ಅಪ್ಲೈಡ್ ಸೈನ್ಸ್ ನ ಕೊರತೆ ಇದೆ. “ಭಾರತೀಯರಲ್ಲಿ ತಂತ್ರಜ್ಞಾನವೆಂಬುದು ಇನ್ನೂ ಕೈ ಬೆರಳುಗಳಿಗೆ ರವಾನೆಯಾಗಿಲ್ಲ” ಎಂಬ ಹಿರಿಯ ಕೈಗಾರಿಕಾ ಬರಹಗಾರರೊಬ್ಬರ (ಅವರ ಹೆಸರು ಗುರುಚರಣ್ ದಾಸ್ ಇರಬೇಕು) ಮಾತು ಬಹಳ ಸತ್ಯವೆನ್ನಿಸುತ್ತದೆ.
ನಾನು ಬ್ರಿಟಿಷರ ನಾಡಿನಲ್ಲಿ ಕಾರು ತಯಾರಿಕೆಗೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಡಿಸೈನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪರ್ಚೇಸ್ ವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ನನಗಿಂತ ಉತ್ತಮವಾಗಿ, ಸಮರ್ಥವಾಗಿ ಕಾರಿನ ವಿನ್ಯಾಸದ ಬಗ್ಗೆ, ಇತರೇ ಟೆಕ್ನಿಕ್ ಗಳ ಬಗ್ಗೆ ಮಾತನಾಡಬಲ್ಲ. ಇವರು ಕಳೆದ ಶತಮಾನದ ಆದಿಯಿಂದ ಕಾರು ಬಳಸುತ್ತಿರುವವರು ಎಂಬುದು ನಿಜವಿದ್ದರೂ ನನ್ನ(ಮ್ಮ) ಅಜ್ಞಾನಕ್ಕೆ ಅದು ಸಮರ್ಥೆನೆಯಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಇವರುಗಳ ಬದುಕಿನಲ್ಲಿ ಹೇಗೆ ಹಾಸು ಹೊಕ್ಕಾಗಿದೆ ಎಂಬುದಷ್ಟೇ ನನಗೆ ಮುಖ್ಯವಾಗಿ ಕಾಣುತ್ತಿರುವುದು. ಇಲ್ಲಿ ನನ್ನ ಮಿತ್ರನೊಬ್ಬನ ಅನುಭವವನ್ನು ದಾಖಲಿಸುವುದು ಉಚಿತವೆನಿಸುತ್ತದೆ. ಆತ ಬೆಂಗಳೂರಿನಲ್ಲಿ ಅಮೇರಿಕನ್ ಮೂಲದ ಕಾರು ತಯಾರಿಕಾ ಸಂಸ್ಥೆಯ ಡಿಸೈನ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾನೆ. ಒಮ್ಮೆ ಆತನನ್ನು ಅಮೆರಿಕಾದ ಕೇಂದ್ರ ಸಂಸ್ಥೆಗೆ ಚರ್ಚೆಯೊಂದಕ್ಕೆ ಆಹ್ವಾನಿಸಲಾಯಿತು. “ಕಳೆದ ವರ್ಷದಿಂದ ಈ ವರ್ಷಕ್ಕೆ ನಿಮ್ಮ ಕೆಲಸದಲ್ಲಿ ಏನು ಪ್ರಗತಿ ಸಾಧಿಸಿದ್ದೀರೆಂದು ಹೇಳಬಲ್ಲಿರಿ?” ಎಂದು ಹಿರಿಯ ಉದ್ಯೋಗಿಯೊಬ್ಬರು ಅನೌಪಚಾರಿಕವಾಗಿ ಈತನನ್ನು ಕೇಳಿದರು.
“ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅರ್ಥಪೂರ್ಣವಾದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ” ಎಂದ ಮಿತ್ರ.
ಸ್ವಲ್ಪ ವಿವರಿಸಿ ನಿಮ್ಮ ಮಾತನ್ನು ಎಂದರು ಅವರು.
“ನಮ್ಮ ಬೆಂಗಳೂರಿನ ವಿಭಾಗದಲ್ಲಿ ಕೆಲಸ ಮಾಡುವ ಒಟ್ಟೂ ಆರು ಸಾವಿರ ಉದ್ಯೋಗಿಗಳಲ್ಲಿ ಶೇಕಡಾ ಹತ್ತು ಜನರ ಬಳಿಯೂ ಕಾರು ಎಂಬ ಪದಾರ್ಥವಿಲ್ಲ. ಆದರೆ ದಿನ ನಿತ್ಯ ನಾವುಗಳು ಕಾರಿನ ವಿವಿಧ ಭಾಗಗಳ ಡಿಸೈನ್ ಮತ್ತು ಡೆವೆಲಪ್ ಮೆಂಟ್ ಕಾರ್ಯದಲ್ಲಿ ಮುಳುಗಿದ್ದೇವೆ. ಕಾರಿನ HVAC ಭಾಗದ ಡಿಸೈನ್ ಮಾಡುತ್ತಿರುವ ಉದ್ಯೋಗಿಯು ಜನ್ಮದಲ್ಲಿ ಆ ವಸ್ತುವನ್ನು ನೋಡಿರುವುದಿಲ್ಲ. ಕೇವಲ ಪುಸ್ತಕ ಜ್ಞಾನ ಮತ್ತು ಡಿಜಿಟಲ್ ಮಾಡೆಲ್ ಗಳಷ್ಟೇ ಆತನ ಆಧಾರ. ಕನಿಷ್ಟ ಪಕ್ಷ ಕಾರೊಂದನ್ನು ಅರ್ಧ ಸೀಳೊಂದನ್ನು (ಡಿಸೆಕ್ಷನ್) ನಮ್ಮಲ್ಲಿ ತಂದಿಟ್ಟರೆ ಅನುಕೂಲವಾಗುತ್ತದೆ. ಅದಿಲ್ಲದಿದ್ದರೆ ನಮ್ಮ ಕೆಲಸ ಕೇವಲ ಡಿಸೈನ್ ಪಡಿಚಾಕರಿಯಾಗುತ್ತದೆ. ಡಿಸೈನ್ ಎಂದು ಕರೆಸಿಕೊಳ್ಳುವುದಿಲ್ಲ”. ಎಂದು ವಿವರಿಸಿದ.
ಈ ಮೇಲಿನ ಹೇಳಿಕೆಗಳು ನಮ್ಮ ಅಕೆಡೆಮಿಕ್ ಶಿಕ್ಷಣದ ಸ್ವರೂಪದಲ್ಲಿ ಬದಲಾವಣೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ. ವಿದೇಶಿ ಕಂಪನಿಗಳು ಮೂಲ ಸಂಶೋಧನೆಯನ್ನು ತಮ್ಮಲ್ಲೇ ಇಟ್ಟುಕೊಂಡು ಅಗ್ಗದ ಮಾನವ ಸಂಪನ್ಮೂಲಗಳಾಗಿ ನಮ್ಮನ್ನು ಬಳಸಿಕೊಳ್ಳುತ್ತವೆ. ಟೊಯೊಟಾ ಸಂಸ್ಥೆ ತನ್ನ ಸಂಶೋಧನಾ ಘಟಕವನ್ನು ಜಪಾನಿನ ವಿಶ್ವವಿದ್ಯಾಲಯಗಳಲ್ಲಿ ತೆರೆಯುತ್ತದೆಯೇ ಹೊರತು ಭಾರತದಲ್ಲಲ್ಲ. ಭಾರತದಲ್ಲಿ ಇಂತಹ ಕೆಲಸಗಳು ಟಾಟಾ, ಬಜಾಜ್, ಮಹಿಂದ್ರಾ ದಂತಹ ಸಂಸ್ಥೆಗಳಿಂದ ಆಗಬೇಕಾಗಿದೆ. ಪ್ರಸ್ತುತದಲ್ಲಿ ನಾವು ತಂತ್ರಜ್ಞಾನದ ಬಳಕೆದಾರರಷ್ಟೇ ಆಗಿದ್ದೇವೆ. ಆದರೆ ಸೃಷ್ಟಿಕಾರರಾಗಿಲ್ಲ. ಹಾಗಾಗುವುದು ಸುಲಭದ ಮಾತಲ್ಲವೆಂಬುದು ಎಷ್ಟು ಸತ್ಯವೋ, ನಮ್ಮನ್ನು ಆಳುವವರ ಮತ್ತು ಉದ್ದಿಮೆದಾರರ ದೂರದೃಷ್ಟಿಯ ಕೊರತೆಯೂ ಇದಕ್ಕೆ ಕಾರಣ ಎಂಬುದು ಅಷ್ಟೇ ಸತ್ಯ.
ನ್ಯಾನೋ ಧಾರವಾಡಕ್ಕೆ ಬಂದೀತೆಂಬ ಆಸೆಯೊಂದಿಗೆ.

-ಚಿನ್ಮಯ.