Thursday, May 15, 2008

ಚುನಾವಣಾ ಪ್ರಹಸನ, ಒಂದು ಅವಲೋಕನ

ನಿಮಗೆ ಆಸಕ್ತಿ ಇರಲಿ ಬಿಡಲಿ ದಿನಪತ್ರಿಕೆಗಳಲ್ಲಿ, ಸುದ್ಧಿವಾಹಿನಿಗಳಲ್ಲಿ ಚುನಾವಣಾ ಸುದ್ಧಿಗಳನ್ನೇ ಓದಬೇಕಾಗಿದೆ. ಸಿದ್ಧಾಂತ, ಪಕ್ಷ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟ ನೇತಾಗಳ ಹಾರಾಟಕ್ಕೆ ಮೂಕಪ್ರೇಕ್ಷಕನಾಗಿರುವ ಪ್ರಜೆಯೆಂಬ ಶತ ದಡ್ಡ ಪ್ರಭು. ಒಬ್ಬರ ಮೇಲೊಬ್ಬರ ಆರೋಪ, ರೆಡ್ ಹ್ಯಾಂಡ್ ಆಗಿ ಜಾತಿ ರಾಜಕೀಯವನ್ನೇ ಮಾಡುತ್ತಾ ''ಜಾತ್ಯತಿತ'' ಎಂಬ ಹೆಸರಿಟ್ಟುಕೊಂಡು ಓಡಾಡುತ್ತಿರುವ ಅಧಿಕಾರ ದಾಹಿಗಳು.ಎಂಥ ಅದ್ಭುತ ಕಥೆಯಾದರೂ ಒಂದಲ್ಲ ನಾಲ್ಕು ಬಾರಿ ಓದಿದಾಗ ಬೇಸರ ತರಿಸಿಬಿಡುತ್ತದೆ. ರೋಚಕ ಸಿನಿಮಾವಾದರೂ ಅಷ್ಟೆ. ಆದರೆ ನೋಡಿದ ನಾಟಕವನ್ನೇ ಮತ್ತೆ ಮತ್ತೆ ಉತ್ಸಾಹದಿಂದ ನೋಡಲು ಮಾತ್ರ ಕನ್ನಡಿಗರಿಗೆ ಬೇಸರವಿಲ್ಲ. ದೇವೇಗೌಡರ ಅಮೋಘ ''ರಕ್ತಕಣ್ಣೀರನ್ನು'' ಮಗದೊಮ್ಮೆ ನೋಡಲು ಅಣಿಯಾಗುತ್ತಿರುವ ಕನ್ನಡದ ಜನತೆಯೇ ಇದಕ್ಕೆ ಸಾಕ್ಷಿ. ದೇವೇಗೌಡರೇ ಹೇಳಿದಂತೆ ಈ ಸಲವೂ ಅವರೇ ಕಿಂಗ್ ಮೇಕರ್ ಆದರೆ ನಾವೆಲ್ಲ ಮೂಗಿನ ಮೇಲೆ ಬೆರಳಿಡುವ ಅಗತ್ಯವಿಲ್ಲ. ಮೂಗಿನ ಒಳಗೆ ಇಟ್ಟರಾಯಿತು. ಅದು ನಮ್ಮ ಖರ್ಮ.
ಟೀವಿ ಚಾನೆಲ್ ಗಳು, ದಿನಪತ್ರಿಕೆಗಳೇನೂ ಹಿಂದೆ ಬಿದ್ದಿಲ್ಲ.ಅವೂ ಯಾವುದಾದರೊಂದು ಪಕ್ಷದೊಂದಿಗೆ ಗುರುತಿಸಿಕೊಂಡಿವೆ. ಜನರ ಹಾದಿ ತಪ್ಪಿಸಲೊಂದು ದಿನಕ್ಕೊಂದು ಸರ್ವೇ. ಪತ್ರಿಕೆಗಳಂತೂ ಇಂಥಹ ಪಕ್ಷಕ್ಕೇ ಓಟು ನೀಡಿ ಎಂದು ಪರೋಕ್ಷವಾಗಿ ಜನರನ್ನು ಪ್ರಚೋದಿಸುವ ಕಾರ್ಯದಲ್ಲಿ ಮುಳುಗಿವೆ. ಎಲ್ಲರಿಗೂ ತಮ್ಮ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುವ ಭ್ರಷ್ಟ ಉದ್ದೇಶ.ಒಂದು ಕಾಲದಲ್ಲಿ ಸಂತೋಷ್ ಕುಮಾರ್ ಗುಲ್ವಾಡಿಯವರ ಸಂಪಾದಕೀಯಗಳನ್ನು ಅತ್ಯಂತ ಹರಿತವಾದವುಗಳೆಂದು ಪರಿಗಣಿಸಲಾಗುತ್ತಿತ್ತು. ಅವರು ತಮ್ಮ ಮಾಮೂಲಿ ಶೈಲಿಯಲ್ಲಿ, ಯಾರ ಹೆಸರನ್ನೂ ಪ್ರಸ್ತಾಪಿಸದೆ, ಕೆಂಪು ಪಟ್ಟಿ ಆಡಳಿತ ಶಾಹಿ, ಪಟ್ಟಭದ್ರ ಹಿತಾಸಕ್ತಿಗಳು, ನಿರ್ಲಜ್ಜರು ಹೀಗೆ ಮುಂತಾದ ನುಡಿಗಟ್ಟುಗಳನ್ನು ಪ್ರಯೋಗಿಸಿ ರಾಜಕಾರಣಿಗಳನ್ನು ಹಳಿ(ಣಿ)ಯುತ್ತಿದ್ದರು. ಅದು ತಮ್ಮದೇ ದನಿಯೆಂದು ಜನ ಪುಳಕಿತರಾಗುತ್ತಿದ್ದರು. (ನಾವು ಚಿಕ್ಕವರಾಗಿದ್ದಾಗ ಗುಲ್ವಾಡಿಯವರ ಬರಹಗಳನ್ನೇ ಭಾಷಣ ಬಿಗಿದು ಶಾಲೆಯಲ್ಲಿ ಬಹುಮಾನ ಗಿಟ್ಟಿಸುತ್ತಿದ್ದೆವು.) ಈಗಿನ ದಿನಗಳಲ್ಲಿ ರವಿ ಬೆಳಗೆರೆಯಂಥವರು ಹನುಮೇಶಿ, ತಿಪ್ಪೇಶಿ ಇತ್ಯಾದಿಗಳ ಹೆಸರುಗಳನ್ನೇ ಬರೆದು ಇವರಿಷ್ಟು, ಅವರೆಷ್ಟು ಭ್ರಷ್ಟಾಚಾರ ಎಸಗಿದ್ದರೆಂದು ಅಂಕಿ ಅಂಶದೊಂದಿಗೆ ಬರೆದರೂ ಕ್ಯಾರೆ ಎನ್ನುವವರಿಲ್ಲ. ನಮಗೂ ಅಭ್ಯಾಸವಾಗಿ ಹೋಗಿದೆ. ಗಮನಿಸಿ ನೋಡಿದರೆ ನಮ್ಮಲ್ಲಿಯೇ ಭ್ರಷ್ಟ ರಕ್ತ ಹರಿಯುತ್ತಿದೆ. ನಮಗೂ ಜಾತಿ ಮುಖ್ಯ ನೋಡಿ. ನಮ್ಮವನು ಮಂತ್ರಿಯಾದರೆ ಯಾವುದಾದರೂಂದು ಬಗೆಯಲ್ಲಿ ಕೆಲಸಕ್ಕೆ (ವೈಯಕ್ತಿಕ) ಬರಬಹುದೆಂಬ ಆಸೆ. ನಮಗೆ ಊರಿಗೊ, ಪಟ್ಟಣಕ್ಕೊ ಕುಡಿಯುವ ನೀರಿನ ವ್ಯವಸ್ತೆ, ಒಂದು ಒಳ್ಳೆಯ ಶಾಲೆ, ಸುವ್ಯವಸ್ತಿತ ಆಸ್ಪತ್ರೆ ಇವ್ಯಾವುದೂ ಬೇಕಿಲ್ಲ. ನಮ್ಮ ಅಗತ್ಯಗಳೆಲ್ಲವೂ ತೀರಾ ವೈಯಕ್ತಿಕ ಮಟ್ಟದವು. ಓಟು ನೀಡುವವನಿಗೆ ದೂರದ್ರಷ್ಟಿಯ ಕೊರತೆ. ಓಟು ಹಾಕಿಸಿಕೊಳ್ಳುವವನ ದ್ರಷ್ಟಿಯಲ್ಲಿಯೇ ಧೂರ್ತತೆ. ಈ ಪ್ರಜೆ ಎಂಬವನೂ ಈ ರಾಜಕರಣಿಗಳಷ್ಟೇ ಭ್ರಷ್ಟ. ಬೀಚಿಯವರ ಆತ್ಮಕತೆಯಲ್ಲಿ ಓದಿದ ನೆನಪು. “ಒಳ್ಳೆಯವರು ಎನಿಸಿಕೊಂಡವರು ಇನ್ನೂ ಒಳ್ಳೆಯವರಾಗಿಯೇ ಇದ್ದಾರೆಂದರೆ ಅವರಿಗಿನ್ನೂ ಬ್ರಷ್ಟರಾಗುವ ಅವಕಾಶ ಒದಗಿ ಬಂದಿಲ್ಲ”. ನಮ್ಮನ್ನು ಆಳುತ್ತೇವಂತ ಹೊರಟ ಅವಿವೇಕಿಗಳ ದಂಡಿದೆಯಲ್ಲ..ಇವರು ಇಂತಹ ಅವಕಾಶ ಮೊದಲು ದಕ್ಕಿಸಿಕೊಂಡವರು. ಪ್ರಜೆಗೂ ಅವಕಾಶ ಸಿಕ್ಕಿದರೆ ಹರಿದುಕೊಳ್ಳುವ ಸುಪ್ತ ಆಸಕ್ತಿ ಇಲ್ಲವೇ? (ಇದು ಇಡೀ ಸಮಾಜಕ್ಕೆ ಸಾರಾಸಗಟಾಗಿ ಅನ್ವಯಿಸುವ ಮಾತಲ್ಲದಿದ್ದರೂ ಪ್ರಸ್ತುತ ವ್ಯವಸ್ಥೆಯಲ್ಲಿ ಜಿಜ್ನಾಸೆಗೊಳಪಡಬೇಕಾದ ಸಂಗತಿ..)
ಸಮಾಜದ ಸ್ವಾಸ್ತ್ಯ ಕಾಪಾಡಬೇಕಾದ ಕೆಳ ಮತ್ತು ಮೇಲ್ಮಧ್ಯಮ ವರ್ಗಗಳು ಬೇಜವಾಬ್ದಾರರಾಗಿದ್ದಾರೆ. ಲಾಗಾಯ್ತಿನಿಂದ ಇವರದು ಸಮಾಜದಲ್ಲಿ ಮೇಲಕ್ಕೇರುವ ನಿರಂತರ ಪ್ರಯತ್ನ. ಅದರಲ್ಲಿಯೇ ಮಗ್ನ. ವ್ಯವಸ್ತೆಯ ರಿಪೇರಿಗೆ ಯಾವತ್ತೂ ಸಮಯವಿಲ್ಲ. ಈಗ ಇವರದು ಹೊಸ ಮಂತ್ರ. ಹೇಗಾದರೂ ಮಾಡಿ ಮಕ್ಕಳನ್ನು ಸೊಫ್ಟವೇರ್ ಎಂಜಿನಿಯರ್ ಮಾಡಿ ಒಂದಷ್ಟು ವಿದೇಶಿ ಹಣದ ಗಂಟು ಭದ್ರ ಮಾಡಿಕೊಳ್ಳುವುದು. ಹೆಣ್ಣುಮಕ್ಕಳಾದರೆ ಇನ್ನೊಂದು ಸೊಫ್ಟವೇರ್ ಎಂಜಿನಿಯರ್ ಹುಡುಕಿ ಮದುವೆ ಮಾಡಿ ಕೊಟ್ಟರಾಯಿತು. ಬೀದರ ಮೂಲೆಯ ಹಳ್ಳಿಯಾದರೂ ಸರಿ ಮಲೆನಾಡಿನ ಕೊಂಪೆಯಾದರೂ ಸರಿ; ಮೇಷ್ಟ್ರು, ಶೆಟ್ರು, ಭಟ್ರು, ಗೌಡ್ರು ಹೀಗೆ ಎಲ್ಲ ಮಧ್ಯಮ ವರ್ಗಿಗಳ ಗುರಿಯೂ ಒಂದೇ.ಇವರಿಗೆ ಆರಿಸಿ ಬರುವವರು ಯಂಕ, ತಿಮ್ಮ ಯಾರಾದರೂ ಅಡ್ಡಿ ಇಲ್ಲ. ಯೋಗ್ಯ ಜನಪ್ರತಿನಿಧಿಗಳನ್ನು ಉತ್ಪಾದಿಸಬಲ್ಲ ಸಮೂಹವೇ ಜವಾಬ್ದಾರಿ ಮರೆತಾಗ ಎಲ್ಲಿಂದ ಉತ್ತಮ ನಾಯಕರನ್ನು ನಿರೀಕ್ಷಿಸೋಣ? ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ, ದಿನ ನಿತ್ಯದ ಬದುಕೇ ಸಮಸ್ಯೆ. ಹಣ ಹೆಂಡಕ್ಕೆ ಆಸೆಪಟ್ಟರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗಾಗಿ ಉತ್ತಮ ಸರ್ಕಾರ, ಸರ್ರ್ವಾಂಗೀಣ ಅಭಿವ್ರದ್ಧಿ ಇತ್ಯಾದಿ ಪದಗಳನ್ನು ಪ್ರಣಾಳಿಕೆಯಲ್ಲಿ ಓದಿ ನಕ್ಕುಬಿಡುವುದು ಒಳಿತು. ಮಧ್ಯಮ ವರ್ಗದ ಟಿಪಿಕಲ್ ಶೈಲಿಯದು. ಆಮೇಲೆ ವ್ಯವಸ್ತೆಗೆ ಬಯ್ಯುತ್ತ, ಗೊಣಗುತ್ತ ಅದರ ಜೊತೆಯಲ್ಲಿಯೇ ಏಗುವದು ಇದ್ದಿದ್ದೇ.

- ಚಿನ್ಮಯ

3 comments:

Supreeth.K.S said...

ನಿಮ್ಮ ಬರಹದ ಧಾಟಿಯನ್ನು ಓದಿದರೆ ಮೇಲುನೋಟಕ್ಕೆ ಪ್ರಾಮಾಣಿಕ ಅಸಮಾಧಾನದ ಭಾವ ಕಂಡರೂ ಮೂಲದಲ್ಲಿ ನೀವು ಹೇಳಿದ ಹಾಗೆಯೇ ಮಿಡ್ಲ್ ಕ್ಲಾಸ್ ಜನರ ಬಾಯಿ ಸೇವೆಯ ಹಾಗೆ ಕಾಣುತ್ತದೆ. ಚುನಾವಣೆಗಳು ಯಾವ ಕಾಲದಲ್ಲಿಯೂ ನಡೆಯುವುದೇ ಹಾಗೆ. ಮಿಡ್ಲ್ ಕ್ಲಾಸ್ ಜನ ಸಮೂಹದಲ್ಲಿ ಸಾಮಾಜಿಕ ಪ್ರಜ್ಞೆ ಎಂಬುದು ಕಡಿಮೆಯಾಗುತ್ತಿದೆ ಎಂಬುದು ತೀವ್ರ ಕಳವಳಕ್ಕೆ ಈಡು ಮಾಡುವ ಸಂಗತಿ. ಆದರೆ ಈ ಮಿಡ್ಲ್ ಕ್ಲಾಸ್ ಎಂಬುದು ನಿಂತ ನೀರಿನಂತಲ್ಲ, ಅದೊಂದು ಕಾಲ ಘಟ್ಟ. ಒಂದು ನಿಲ್ದಾಣ. ಮಧ್ಯಮವರ್ಗಕ್ಕೆ ಕೆಳವರ್ಗದಿಂದ ಹಾರುವವರಿದ್ದಾರೆ, ಮಧ್ಯಮ ವರ್ಗದಿಂದ ಮೇಲ್ವರ್ಗಕ್ಕೆ ನೆಗೆಯುವವರಿದ್ದಾರೆ. ಹೀಗಿರುವಾಗ ಮಧ್ಯಮ ವರ್ಗ ಇಡೀ ಸಮಾಜದ ದಿಕ್ಕನ್ನು ನಿರ್ಧರಿಸುವುದು ಎಂಬುದನ್ನು ಹೇಗೆ ಒಪ್ಪುವುದು?

ಚಿನ್ಮಯ said...

ಪ್ರಿಯ ಸುಪ್ರೀತ್,

ನಿಮಗೆ ಸ್ವಾಗತ. ಅಂತೂ ನನ್ನ ಬರಹವನ್ನು ಕೆಲವರಾದರೂ ಓದಿ ವಿಮರ್ಶಿಸಿದ್ದಾರೆಂಬುದಕ್ಕೆ ಪುರಾವೆ ಒದಗಿಸಿದ್ದೀರಿ.
ಸ್ಪಂದಿಸಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದ ಹಾಗೆ ಮಧ್ಯಮ ವರ್ಗ ನಿಂತ ನೀರಲ್ಲ. ಇದು ಚಲಿಸುತ್ತಲೇ ಇದೆ. ೬೦ರ ದಶಕದಲ್ಲಿ ತೆವಳುವ ಸ್ವರೂಪದಲ್ಲಿದ್ದ ಈ ಚಲನೆ, ೯೦ರ ದಶಕದ ಕೊನೆಯ ಹೊತ್ತಿಗೆ ಜಗತ್ತೇ ಗುರುತಿಸಬಹುದಾದಂತಹ ವೇಗವನ್ನು ಪಡೆದುಕೊಂಡಿದ್ದು ಈಗ ಇತಿಹಾಸ. ಕೆಳವರ್ಗ ಮಧ್ಯಮವರ್ಗಕ್ಕೂ, ಮಧ್ಯಮವರ್ಗ ಇನ್ನೂ ಮೇಲಕ್ಕೂ ಏರುವ ಪ್ರಕ್ರಿಯೆ ನಿರಂತರ ಸಾಗಿದೆ. ಆದರೆ ಮಧ್ಯಮವರ್ಗದ ಉಪಸ್ತಿತಿ ಇಲ್ಲವಾಗಿಲ್ಲ. ಬದಲಿಗೆ ಇದರ ಗಾತ್ರ ಮೊದಲಿಗಿಂತ ಗಣನೀಯವಾಗಿ ಹೆಚ್ಚಾಗಿದೆ. ವ್ಯವಸ್ತೆ ಎಂಬುದು ಹೇಗಿರಬೇಕೆಂಬ ಪರಿಕಲ್ಪನೆಯೇ ಇರದ ಕೆಳವರ್ಗ ಗಾತ್ರದಲ್ಲಿ ಎಷ್ಟೇ ದೊಡ್ಡದಿದ್ದರೂ ಕೂಳಿನ ಜಂಜಾಟವೇ ಇವರೆದುರಿಗಿರುವ ಅತಿ ದೊಡ್ಡ ಸವಾಲು. ಧನಿಕನಿಗೆ ಈರುಳ್ಳಿ ಬೆಲೆಯೇರಿಕೆಯಂತಹ ಸಣ್ಣ ಸಂಗತಿಗಳು ತಲೆಬಿಸಿಯ ವಿಚಾರವಲ್ಲ. ತನ್ನ ಕಾರು ದುಬಾರಿಯದಾದರೂ ರಸ್ತೆ ಮಾತ್ರ ಇದೇ ಎಂಬುದು ಆತನ ಸದ್ಯದ ಚಿಂತೆ. ಸೈಟಿಗೆ ಜೀವಮಾನದಲ್ಲಿ ದುಡಿದಿದ್ದನ್ನೆಲ್ಲ ಸುರಿದಾಯಿತು. ಈ ಸಬ್ ರಿಜಿಸ್ಟ್ರಾರ್ ಕೇಳುವ ಲಂಚದ ಹಣ ಎಲ್ಲಿಂದ ತರಲಿ ಎಂಬುದು ಮಧ್ಯಮ ವರ್ಗದವನ ವ್ಯಥೆ. ಅಗಾಧ ಗಾತ್ರವಿದ್ದೂ, ವ್ಯವಸ್ತೆಯ ಎಲ್ಲ ಲೋಪಗಳ ನೇರ ಬಿಸಿ ತಮಗೇ ತಟ್ಟುವುದೆಂಬ ಸ್ಪಷ್ಟ ಕಲ್ಪನೆ ಇದ್ದೂ ಮಧ್ಯಮ ವರ್ಗದ ನಿಷ್ಕ್ರೀಯತೆಯ ಬಗ್ಗೆ ಒಂದು ಜಿಗುಪ್ಸೆಯ ರೂಪದಲ್ಲಿ ಹುಟ್ಟಿರುವ ಚಿಂತನೆಯಷ್ಟೆ. ನಾನೂ ಇದೇ ವರ್ಗಕ್ಕೆ ಸೇರಿರುವವನಾದರಿಂದ ನೀವು ಹೇಳಿರುವ ಹಾಗೆ ಕೈ ಸೇವೆಗಿಂತ ಬಾಯಿಸೇವೆಯೇ ಜಾಸ್ತಿ. ಒಂದಲ್ಲ ಒಂದು ದಿನ ಕ್ರಾಂತಿಯಾಗಿ ಸುಖ ಸಂತೋಷ ನೆಲಸುತ್ತದೆಂದು ನಂಬಿ ಮೊದಲಿನಂತೆ ನಿಷ್ಕ್ರೀಯನಾಗಿ ಬೆಚ್ಚಗೆ ಕುಳಿತ ಹುಲು ಮಧ್ಯಮಿ ನಾನು.


-ಚಿನ್ಮಯ.

Unknown said...

Hey Chinmay,

Nice article. Your thoughts and language are great.

Rgds,
Mithun Hande