Friday, November 14, 2008

ಹೀಗೊಂದು ಪ್ರತಿಕ್ರಿಯೆ

ಇತ್ತೀಚೆಗೆ ರುಜುವಾತು ಸಂಪದ. ನೆಟ್ ನಲ್ಲಿ ಪ್ರಕಟವಾದ ಡಾ. ಆನಂತಮೂರ್ತಿಗಳ ‘ಇವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು’ ಬರಹಕ್ಕೆ ನಾನು ಬರೆದ ಪ್ರತಿಕ್ರಿಯೆ. ಪ್ರಕಟಿಸಿದ ರುಜುವಾತು ಸಂಪದ ತಂಡಕ್ಕೆ ವಂದನೆಗಳು.

ನಮಸ್ಕಾರ ಸರ್,
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಪಕ್ಷವೊಂದನ್ನು ಕಟ್ಟುವ ಪ್ರಯತ್ನಗಳು ನಿರಂತರ ಜಾರಿಯಲ್ಲಿರುವುದನ್ನು ಸಾದ್ಯಂತವಾಗಿ ವಿವರಿಸಿದ್ದೀರಿ. ಈ ಪ್ರಯತ್ನದಲ್ಲಿ ಅಲ್ಲಲ್ಲಿ ತಾತ್ಕಾಲಿಕ ಯಶಸ್ಸು ಕಂಡುಬಂದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯೇ ಕಾಂಗ್ರೆಸ್ಸಿನ ಪರ್ಯಾಯವಾಗಿದ್ದು ನಮ್ಮ ಕಣ್ಣ ಮುಂದಿದೆ.
ನನ್ನ ದೃಷ್ಟಿಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ದ್ವಿಜಶಾಹಿ ಪಕ್ಷಗಳೇ. ಬಿಜೆಪಿ ಅಂಗಿ ಬಿಚ್ಚಿ ನಿಂತಿದ್ದರಿಂದ ಜನಿವಾರ ಕಾಣುತ್ತಿದೆ ಅಷ್ಟೆ. ನಾಳೆ ಮುಸಲರಿಗೆ ಮತ್ತು ಕ್ರೈಸ್ತರಿಗೆ ಓಟು ಹಾಕುವ ಹಕ್ಕಿಲ್ಲವೆಂದಾಗಿಬಿಟ್ಟರೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ಚುನಾವಣೆಗೆ ಬಹು ಮುಖ್ಯ ವಿಷಯವೇ ಕಳೆದು ಹೋಗುತ್ತದೆ. ಬಿಜೆಪಿಯ ಹಿಂದುತ್ವ ಹಿಂದೆ ಸರಿಯಬೇಕಾಗುತ್ತದೆ. ಆಗ ಕೋಮುವಾದ ಎಂಬ ಶಬ್ದಕ್ಕೆ ರಾಜಕೀಯ ಅರ್ಥವಿರುವುದಿಲ್ಲ. ಆಗ ಮುಂಚೂಣಿಗೆ ಬರುವುದು ಜಾತಿವಾದ ಮಾತ್ರ. (ಈ ಕಾಲ್ಪನಿಕ ಸನ್ನಿವೇಶದಲ್ಲಿ ಬ್ರಾಹ್ಮಣರು ಅಲ್ಪ ಸಂಖ್ಯಾತರಾಗುವುದರಿಂದ ಅವರ ಓಟುಗಳೇ ನಿರ್ಣಾಯಕವಾಗಿಬಿಡಬಹುದು. ಪುನಃ ಅದು ಪುರೋಹಿತಶಾಹಿ ವ್ಯವಸ್ಥೆಯೇ ಆಗಿಬಿಡುವ ಅಪಾಯವಿದೆ)
ಕಾಂಗ್ರೆಸ್ ತನ್ನ ಸುದೀರ್ಘ ಆಳ್ವಿಕೆಯಲ್ಲಿ ಅಷ್ಟಾಗಿ ಗಮನ ಹರಿಸದ ಸಂಗತಿಗಳನ್ನು ಬಿಜೆಪಿ ಬಲವಾಗಿ ಅಪ್ಪಿಕೊಂಡಿತು. ಕಾಂಗ್ರೆಸ್ಸಿನ ತಪ್ಪುಗಳು ಅವೇ ಅವಾಗಿ ಬಿಜೆಪಿಗೆ ಒಂದು ಬಲವಾದ ಪಕ್ಷವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟವು. ಸುಮಾರು ಐವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿಗೆ ಮುಸ್ಲಿಮರ ಓಟಷ್ಟೇ ಬೇಕಾಯಿತು. ಅವರ ಉದ್ಧಾರ ಬೇಕಿರಲಿಲ್ಲ. ಇಷ್ಟು ಸುದೀರ್ಘ ಅವಧಿಯಲ್ಲಿ ಒಂದು ಜನಾಂಗವನ್ನು (ದಲಿತರನ್ನೊಳಗೊಂಡು) ಮುಖ್ಯವಾಹಿನಿಗೆ ತರುವುದು ಖಂಡಿತ ಸಾಧ್ಯವಿತ್ತು – ಇಚ್ಛಾ ಶಕ್ತಿ ಇದ್ದಿದ್ದರೆ. ಮುಸ್ಲಿಮರು ಈಗಾಗಲೇ ಮುಖ್ಯವಾಹಿನಿಯೊಳಗಿದ್ದಿದ್ದರೆ ದೇಶದೊಳಗಿನ ಮುಸ್ಲಿಮರಿಂದಲೇ ಬಾಂಬ್ ಸ್ಫೋಟಗಳು ಆಗುವುದು ಸಾಧ್ಯವಿರಲಿಲ್ಲ. ಇದು ಕಾಂಗ್ರೆಸ್ಸಿನ ಅತಿ ದೊಡ್ಡ ವೈಫಲ್ಯ. ಈಗ ನೆಡೆಯುತ್ತಿರುವ ಸರಣಿ ಸ್ಫೋಟಗಳು ಮುಂದಿನ ಚುನಾವಣೆಗೆ ಬಿಜೆಪಿಯನ್ನು ಬಲಗೊಳಿಸುತ್ತಲೇ ಹೋಗುತ್ತವೆ ಎಂಬುದು ವಿಪರ್ಯಾಸವಾದರೂ ಕಠೋರ ಸತ್ಯ.
ಇನ್ನು ಕಾಂಗ್ರೆಸ್ ಅವಧಿಯಲ್ಲೇ ರಚಿತವಾದ ಭಾಷಾವಾರು ಪ್ರಾಂತ್ಯ ವಿಂಗಡಣೆಯೆಂಬ ಸೂತ್ರವೇ ರಾಷ್ಟ್ರೀಯ ಕಲ್ಪನೆಗೆ ವಿರುದ್ಧವಾಗಿದೆಯೇನೋ ಎಂಬ ಅನಿಸಿಕೆ ನನ್ನಲ್ಲಿ ವ್ಯಕ್ತವಾಗಲಾರಂಭಿಸಿದೆ. ಇದು ಒಳ್ಳೆಯ ನಿರ್ಣಯವಾಗಿತ್ತೋ ಅಥವಾ ಕೆಟ್ಟದಾಗಿತ್ತೋ ಎಂಬ ಆಳ ವಿಮರ್ಶೆಗೆ ನನ್ನ ತಿಳುವಳಿಕೆ ಕಡಿಮೆ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಇದು ಹೊಡೆತ ಕೊಡುತ್ತಲೇ ಇದೆ. ಇವತ್ತು ರಾಜ್ ಠಾಕ್ರೆಯ ಭಾಷಾಧಾರಿತ ಹಿಂಸಾಚಾರಗಳು ಆತನಿಗೆ ವೈಯಕ್ತಿಕ ರಾಜಕೀಯ ಅಭಿವೃದ್ಧಿಗೂ ಕೊನೆಯಲ್ಲಿ ಒಂದು ದಿನ ಬಿಜೆಪಿಗೇ ಅನುಕೂಲವಾಗಬಹುದು. ( ಆತನಿಗೆ ಬಿಜೆಪಿ ಕಾಂಗ್ರೆಸ್ಸಿಗಿಂತ ಹತ್ತಿರವಾದ ಪಕ್ಷ.) ಕರವೇ ದಂತಹ ನೆಲ ಜಲದ ಕುರಿತು ಹೋರಾಡುತ್ತಿರುವ ಸಂಘಟನೆಗಳಿಗೆ ಬಿಜೆಪಿಯೊಂದೇ ಆಶಾಕಿರಣವಾಗಿ ಉಳಿದಿದೆಯೆಂಬ ಸಂಶಯ ನನ್ನಲ್ಲಿದೆ. ಪ್ರಸ್ತುತ ರಾಜಕೀಯದಲ್ಲಿ ಭಾಷೆ ಎಂಬುದು ಧರ್ಮಕ್ಕಿಂತ ಜಟಿಲವಾದ ಮತ್ತು ಬಹಳ ಸಂಕೀರ್ಣವಾಗುತ್ತಿರುವ ಸಂಗತಿ. ಹಿಂದೂ ಮುಸ್ಲಿಂ ಎಂಬ ಸರಳ ಲೆಕ್ಕಾಚಾರಗಳು ಭಾಷೆಯ ವಿಚಾರದಲ್ಲಿ ಕೆಲಸ ಮಾಡಲಾರವು. ಲಾಲೂರನ್ನು ಖುಷಿಪಡಿಸಲು ರಾಜ್ ರನ್ನು ಹಣಿಯಲು ಹೋದರೆ ಒಂದಿಷ್ಟು ಮರಾಠಿ ಓಟುಗಳನ್ನು ಕಳೆದುಕೊಳ್ಳಲು ಕಾಂಗ್ರೆಸ್ ತಯಾರಾಗಿರಲೇಬೇಕು. ಕನ್ನಡ,ಮರಾಠಿ, ಬಂಗಾಳಿ ಇತ್ಯಾದಿ ಪ್ರತ್ಯೇಕ ಪ್ರಾಂತ್ಯವಾಗಿದ್ದುಕೊಂಡು ರಾಷ್ಟ್ರೀಯತೆಯ ಮನೋಭಾವ ಬೆಳೆಸಿಕೊಳ್ಳುವುದು ತಾರ್ಕಿಕವಾಗಿ ಸಾಧ್ಯವಾಗಬಹುದು ಆದರೆ ಜನಸಾಮನ್ಯನಲ್ಲಿ ಅದು ಕಷ್ಟ ಎಂದೇ ನನ್ನ ಅನಿಸಿಕೆ.
ಇದು ಕಾಂಗ್ರೆಸ್ಸಿನ ಕಥೆಯಾಯಿತು. ಸಮಾಜವಾದದ ಹಿನ್ನೆಲೆಯಿಂದ ಹುಟ್ಟಿಕೊಂಡ ಜನತಾ ಪರಿವಾರಕ್ಕೆ ಬಂದ ಯಶಸ್ಸನ್ನು ಕಾಯ್ದುಕೊಳ್ಳುವ ಸಾಮರ್ಥ್ಯವೇ ಇಲ್ಲದಾಯಿತು. ಕಾಂಗ್ರೆಸ್ಸು ಇವತ್ತು ಒಂದು ಕುಟುಂಬದ ಸ್ವತ್ತು. ಜನತಾ ಪರಿವಾರ ಹರಿಹರಿದು ಕೆಲವು ಕುಟುಂಬಗಳ ಸ್ವತ್ತು. ಹಾಗೆ ನೀಡಿದರೆ ಬಿಜೆಪಿಯಲ್ಲಿಯೇ ಕುಟುಂಬಕಾರಣ ಇಲ್ಲವೆನ್ನಬಹುದು.
ತಮ್ಮ ಲೇಖನದ ಕೊನೆಯಲ್ಲಿ ಬಿಜೆಪಿಯೇತರ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಸೋಲಿಸಬೇಕು ಎಂದಿದ್ದೀರಿ. ಆದರೆ ಅದರಿಂದ ಒಳಿತೇನು ಎಂಬುದು ಸ್ಪಷ್ಟಗೊಳ್ಳುವುದಿಲ್ಲ. ಸರಿಯಾದ ನಾಯಕರಿಲ್ಲದೇ ಎಲ್ಲವೂ’ಹತ್ತನೇ ಮನೆ’ ಯಿಂದಲೇ ನಿರ್ಧಾರಿತಗೊಳ್ಳುವ ಮುಖವಿಲ್ಲದ ಕಾಂಗ್ರೆಸ್ ಅನ್ನು ಹೇಗೆ ಆರಿಸೋಣ? ಕಾಂಗ್ರೆಸ್ಸೇತರರೆಡೆಗೊಮ್ಮೆ ನೋಡಿ. ದೇವೆಗೌಡ ಅಂಡ್ ಸನ್ಸ್, ಲಾಲೂ ಯಾದವ್, ಪಾಸ್ವಾನ್ ಇವರ್ಯಾರಾದರೂ ನಂಬಿಕೆಗೆ ಅರ್ಹರೇ? ನೀವು ಹೇಳುವ ಸಮಾಜವಾದದ ಸಿದ್ಧಾಂತಗಳೆಲ್ಲ ಇವರೆಲ್ಲ ಮರೆತು ಯಾವ ಕಾಲವಾಯಿತು. ಶಿಸ್ತಿನ ಪಕ್ಷವೆಂದುಕೊಂಡಿದ್ದ ಬಿಜೆಪಿಗೇ ಈಗ ಸಿದ್ಧಾಂತಗಳಿಲ್ಲ. ಯಡ್ಯೂರಪ್ಪನವರದು ಈಗ ಬರೀ ‘ಲೋಹವಾದ’.
ಹಟತೊಟ್ಟು ಬಿಜೆಪಿಯನ್ನು ಸೋಲಿಸಬೇಕೆಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ. ಏಕೆಂದರೆ ಹಾಗೆ ಸೋಲಿಸುವುದರಿಂದ ಅಂತಹ ಪ್ರಯೋಜನವಿಲ್ಲ. ಬದಲಿಗೆ ವಯಸ್ಸು ಕಳೆದಂತೆ ಕೊಂಚ ಮಂದಗಾಮಿಯಾಗಿ ತೋರುತ್ತಿರುವ ಅಡ್ವಾಣಿಯವರಲ್ಲಿಯೇ ದೇಶವನ್ನು ಮುನ್ನೆಡೆಸುವ ಸತ್ವ ಕಾಣಿಸುತ್ತದೆ ನನಗೆ. ಧರ್ಮವೆಂಬ ಆಫೀಮು ಮೆಲ್ಲುವ ಅಂಗ ಸಂಸ್ಥೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡರೆ ಅವರು ಖಂಡಿತವಾಗಿ ಯಶಸ್ಸುಗಳಿಸಬಲ್ಲರು ಅನ್ನಿಸುತ್ತದೆ.
ವಂದನೆಗಳು.
-ಚಿನ್ಮಯ.

1 comment:

Kiran said...

soooooooooooper.........!!!