Wednesday, October 15, 2008

ನಿಂತು ನಗಿಸುವ ಗಾರುಡಿ

ಇತ್ತೀಚೆಗೆ ಹಾಸ್ಯೋತ್ಸವಗಳನ್ನು ನಾನು ನೋಡಿಲ್ಲ. ಕನ್ನಡದಲ್ಲಿ ಇವುಗಳು ದೊಡ್ಡ ಪ್ರಮಾಣದಲ್ಲಿ ಪ್ರಚಲಿತಕ್ಕೆ ಬಂದೇ ಆರೆಂಟು ವರ್ಷಗಳಾದವೇನೋ. ಬಹುಬೇಗ ಜನಪ್ರಿಯತೆಯ ಪರಾಕಾಷ್ಟತೆ ತಲುಪಿ ಮೆರೆದ ಇದರ ಈಗಿನ ಸ್ಥಿತಿ ನಮ್ಮ ಈಗಿನ ಷೇರು ಸೂಚ್ಯಂಕದಷ್ಟೇ ಕೆಳಕ್ಕೆ. ಹೆಚ್ ಎನ್ ಕಲಾಕ್ಷೇತ್ರದಲ್ಲಿ ಪ್ರತಿ ಕ್ರಿಸ್ಮಸ್ ದಿನದಂದು ನಡೆಯುತ್ತಿದ್ದ ಹಾಸ್ಯೋತ್ಸವಕ್ಕೆ ಹೆಂಗಸರು ಮಕ್ಕಳಾದಿಯಾಗಿ ಬೆಳಿಗ್ಗೆ ಆರಕ್ಕೇ ಬಂದು ಕೂರುತ್ತಿದ್ದುದು ನೆನಪಾಗುತ್ತದೆ. ಪ್ರೊ. ಅ. ರಾ ಮಿತ್ರ ತುಂಬ ಸೊಗಸಾಗಿ ನೆಡೆಸಿಕೊಡುತ್ತಿದ್ದರು. ಈಗಲೂ ಅದೇ ಆಕರ್ಷಣೆ ಅಲ್ಲಿ ಉಳಿದಿದೆಯೋ ಇಲ್ಲವೋ ತಿಳಿದಿಲ್ಲ.
ಆಮೇಲೆ ಶುರುವಾಯಿತು ನೋಡಿ, ಗಲ್ಲಿ ಗಲ್ಲಿಗಳಲ್ಲಿ ದಿನ ಬೆಳಗಾದರೆ ಹಾಸ್ಯೋತ್ಸವ. ಜೋಕುಗಳು ಹಪ್ಪು ಹಳಸಲಾದರೂ ಬಿಡದೇ ಅಗಿದರು ನಗೆಗಾರರು. ಸರ್ದಾರ್ ಜಿ ಜೋಕುಗಳು, ಇಂಟರ್ ನೆಟ್ ಜೋಕುಗಳು, ಬೀಚಿ ಜೋಕುಗಳು ಎಲ್ಲ ಮುಗಿದ ಮೇಲೆ ಅವರಾದರೂ ಏನು ಮಾಡಿಯಾರು? ತಮ್ಮ ಸೃಜನಶೀಲತೆಯಿಂದ ಸೃಷ್ಟಿಸಿದ ಅದ್ಭುತ ಉತ್ಪತ್ತಿಗಳಿಂದ ಸ್ವತಃ ಬೀಚಿಯವರಿಗೆ ಎಷ್ಟು ಉತ್ಪನ್ನ ಹುಟ್ಟಿತ್ತೋ ಗೊತ್ತಿಲ್ಲ ಆದರೆ ಅವರು ಸಂದು ಹಲವು ವರ್ಷಗಳ ನಂತರ ಕೆಲವು ಜನರ ಹೊಟ್ಟೆ ತುಂಬಿಸಿದ್ದಂತೂ ನಿಜ. ಗಮನಿಸಬೇಕಾದ್ದೆಂದರೆ ಬೀಚಿ ಎಂದರೆ ಏನೆಂದು ಗೊತ್ತಿಲ್ಲದ ಮತ್ತು ಹೆಸರಷ್ಟೇ ಕೇಳಿದ್ದ ಜನಕ್ಕೂ ರಾಯಸಂ ಭೀಮಸೇನ್ ರಾವ್ ರ ತಾಕತ್ತೇನೆಂದು ತಿಳಿಯಿತು. ಪ್ರಾಣೇಶರಂತವರಿಗೆ ಅದರ ಪಾಲು ಸಲ್ಲಬೇಕಾದ್ದೇ.
ಪಾಶ್ಚಾತ್ಯರಲ್ಲಿ ಸ್ಟಾಂಡ್ ಅಪ್ ಕಾಮಿಡಿ ಎಂಬುದು ಬಹಳ ಹಳೆಯ ಮತ್ತು ಜನಪ್ರಿಯ ಅಭಿವ್ಯಕ್ತಿ. ೧೯ನೇ ಶತಮಾನದಲ್ಲಿಯೇ ಹುಟ್ಟು ಪಡೆದ ಈ ಪ್ರಾಕಾರ ಎಪ್ಪತ್ತರ ದಶಕದಲ್ಲಿ ಉತ್ತುಂಗಕ್ಕೆ ಏರಿದ್ದೊಂದೇ ಅಲ್ಲ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರುವಷ್ಟರ ಮಟ್ಟಕ್ಕೆ ಬೆಳೆದಿತ್ತು ಎಂಬ ಉಲ್ಲೇಖಗಳಿವೆ. ಈಗಲೂ ಇದು ಸಾಕಷ್ಟು ಸತ್ವವನ್ನು ಉಳಿಸಿಕೊಂಡಿದೆ ಅಲ್ಲಿ.
ನಗೆಗಾರರಿಗೂ ಸುದ್ದಿಗಾರರಿಗೂ ಒಂದು ಸಾಮ್ಯವಿದೆ. ನಿತ್ಯವೂ ನೂತನವಾದ್ದನ್ನು ಹುಡುಕಬೇಕು. ಸುದ್ದಿ ಓದಿದ ಮರುಕ್ಷಣದಲ್ಲಿ ಹಳತಾಗಿಬಿಡುತ್ತದೆ. ಜೋಕು ಕೇಳಿದ ತಕ್ಷಣಕ್ಕೆ ಹಳಸಲಾಗಿಬಿಡುತ್ತದೆ. ಕೇಳಿದ ಅಥವಾ ಓದಿದ ಹಾಸ್ಯಗಳೇ ಆದರೂ ಕೆಲವು ಆಗಾಗ ನೆನಪಾಗಿ ಸಟಕ್ಕನೆ ನಗೆ ತರಿಸಿವುದುಂಟು. ತಂತ್ರದ (concept) ಹಿನ್ನೆಲೆಯಿರುವ ಜೋಕುಗಳು ಹೀಗೆ ಮಾಡಬಲ್ಲವು. ಅದ್ಭುತ ಆಂಗಿಕ ಅಭಿನಯವುಳ್ಳ ಹಾಸ್ಯಗಳಿಗೂ ನಿರಂತರ ಗಟ್ಟಿತನವಿರುತ್ತದೆ. ಮಿ.ಬೀನ್ ಇದಕ್ಕೆ ಒಳ್ಳೆಯ ಉದಾಹರಣೆ. ಬೀಚಿ ಸೋಮಾರಿ ರಾಜ್ಯವೊಂದರ ವರ್ಣನೆ ಮಾಡುತ್ತಾ, ''ಆ ರಾಜ್ಯದಲ್ಲಿ ಗಿಡದಲ್ಲಿ ಸುಲಿದ ಬಾಳೆ ಹಣ್ಣೇ ಬೆಳೆಯುತ್ತಿತ್ತು.” ಎಂದು ಬರೆದರು. ಇಂತಹ ಹಾಸ್ಯಕ್ಕೆ ಭಾಷೆಯ ಹಂಗಿಲ್ಲ ನೋಡಿ. ಸಸ್ಯ ವಿಜ್ಞಾನಿಗಳು ಇದನ್ನು (ಸುಲಿದ ಬಾಳೆಹಣ್ಣಿನ ಗಿಡ) ನಿಜವಾಗಿಸುವವರೆಗೂ ಈ ಹಾಸ್ಯ ಹಸಿರಾಗಿಯೇ ಇರುತ್ತದೆ. ಭಾಷೆಯ ಚಳಕದಿಂದ, ಪ್ರಾಸಗಳಿಂದ ಜನಿತವಾಗುವ ಹಾಸ್ಯಗಳ ವ್ಯಾಪ್ತಿ ಚಿಕ್ಕದು. ಹಾಗೆ ನೋಡಿದರೆ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯವಾದ ಯಕ್ಷಗಾನದಲ್ಲಿ ಉತ್ತಮ ದರ್ಜೆಯ ಹಾಸ್ಯಗಳು ಸೃಷ್ಟಿಯಾಗುತ್ತವೆ. ಮತ್ತು ಅವು ಆಶುಹಾಸ್ಯಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಇವರ ಮಿತಿಗಳೇನೆಂದರೆ ಅವರು ಹೇಳುವ ಹಾಸ್ಯದ ಮಾತುಗಳು (ಬಹುಪಾಲು) ಅತಿ ಪ್ರಾದೇಶಿಕವಾದವುಗಳು. ಕಲಾವಿದರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಸಂಗತಿಗಳನ್ನು ಪ್ರಸಂಗಕ್ಕೆ ಧಕ್ಕೆಯಾಗದಂತೆ ಜಾಣ್ಮೆಯಿಂದ ಹಾಸ್ಯಕ್ಕೆ ಇಳಿಸುವ ವಿದೂಷಕರು ಕರತಾಡನ ಗಿಟ್ಟಿಸುತ್ತಾರಾದರೂ ಸಮಸ್ತ ಜನತೆಗೆ ತಲುಪಲಾರದ ಕೊರತೆ ಎದ್ದು ಕಾಣುತ್ತದೆ.
ನಗೆಗಾರನೇ (ಸ್ಟಾಂಡ್ ಅಪ್ ಕಾಮಿಡಿಯನ್) ಹಾಸ್ಯಗಳನ್ನು ಸೃಷ್ಟಿಸುವ ಸೃಜನಶೀಲನಾಗಿದ್ದರೆ ಆತನ ಭವಿಷ್ಯ ದೀರ್ಘವಾಗಿರುತ್ತದೆ. ಬೇರೆಯವರು ಬರೆದಿದ್ದನ್ನು ಹೇಳುವ ಹಾಸ್ಯ ಹಾಸ್ಯವೇ ಆಗಿದ್ದರೂ ಅದರ ಖಜಾನೆಗೆ ಮಿತಿಗಳಿವೆ. ಮತ್ತು ಮೊದಲೇ ಓದಿದ, ಕೇಳಿದ ಪ್ರೇಕ್ಷಕನಿಗೆ ಅದು ಅತೀವ ಕಿರಿಕಿರಿಯನ್ನುಂಟುಮಾಡುತ್ತದೆ. ಹೀಗಾದಾಗಲೇ ನಗೆಗಾರರು ನಗೆಪಾಟಲಿಗೆ ಒಳಗಾಗತೊಡಗುತ್ತಾರೆ. ಜನಾಕರ್ಷಣೆ ಕಡಿಮೆ ಆಗತೊಡಗುತ್ತದೆ. ಹಾಸ್ಯೋತ್ಸವಗಳು, ‘ಇಲ್ಲಿ ಕುಳಿತಿರುವುದೇ ಅಲ್ಲಿ ಕುಳಿತರಾಯಿತೆಂಬ’(ಬೀಚಿ ಉವಾಚ) ಧೋರಣೆಯ ಜನಕ್ಕೆ ಸೀಮಿತವಾಗುತ್ತವೆ. ಪಾಶ್ಚಾತ್ಯ ನಗೆಗಾರರು ಸರಕು ಮುಗಿದಾಗ ಕ್ಲಬ್ಬುಗಳಲ್ಲಿ ಅಶ್ಲೀಲ ಜೋಕುಗಳನ್ನು ಹೇಳಿಕೊಂಡಾದರೂ ಬದುಕುವ ಅವಕಾಶಗಳಿವೆ. ಹಾಸ್ಯದ ಸೃಷ್ಟಿಗೆ ಅತಿ ಅಗ್ಗದ ಸಾಧನವೇ ಅಶ್ಲೀಲತೆ. ನಮ್ಮಲ್ಲಿ ಅದರ ಸಾಧ್ಯತೆಗಳು ಕಡಿಮೆಯಾದ್ದರಿಂದ ನಮ್ಮ ನಗೆಗಾರರು ಒಂದು ಹಂತಕ್ಕೆ ತಲುಪಿ ದಿಕ್ಕುಗಾಣದೇ ನಿಂತುಬಿಡುತ್ತಾರೆ. ಪ್ರಾಣೇಶರು ಮತ್ತು ಕೃಷ್ಣೇ ಗೌಡರು ಈ ಪ್ರಾಕಾರಕ್ಕೆ ತಕ್ಕಮಟ್ಟಿಗಿನ ನ್ಯಾಯ ಒದಗಿಸುತ್ತಾರಾದರೂ ಏಕತಾನದಿಂದ ಹೊರಬರುವುದಕ್ಕೆ ಸಾಧ್ಯವಾಗಿಲ್ಲ. ದಯಾನಂದರು ಮಿಮಿಕ್ರಿಗೆ ಸೀಮಿತವಾಗುತ್ತಾರೆ. ಇದು ಇವರುಗಳ ಬಗೆಗಿನ ಪುಕಾರಲ್ಲ. ದಿನ ನಿತ್ಯ ಹೊಸದನ್ನು ತರುವುದು ಸುಲಭವಲ್ಲ ಎಂಬುದನ್ನು ಯಾರೂ ಒಪ್ಪಿಕೊಳ್ಳಬೇಕಾದದ್ದೇ.
ಭಾರತೀಯ ಸ್ಟಾಂಡ್ ಅಪ್ ಕಾಮಿಡಿಯ ಬಗ್ಗೆ ಹೇಳುವಾಗ ರಾಜು ಶ್ರೀವಾಸ್ತವ್ ರನ್ನು ಪ್ರಸ್ತಾಪಿಸಲೇಬೇಕಾಗುತ್ತದೆ. ಬಾಲಿವುಡ್ ಸಿನಿಮಾಗಳಲ್ಲಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈತನ ಅಗಾಧ ಹಾಸ್ಯಪ್ರಜ್ಞೆ ಮತ್ತು ಪ್ರತಿಭೆ ಬೆಳಕಿಗೆ ಬಂದಿದ್ದು ‘ಲಾಫ್ಟರ್ ಚಾಲೆಂಜ್’ ಎಂಬ ಎಪಿಸೋಡುಗಳ ಮೂಲಕ. ಇವರ ಬಗ್ಗೆ ನಾನು ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ. ಹಿಂದಿ ಬಲ್ಲ ಎಲ್ಲ ಭಾಷೆಯ ಟೀವಿ ವೀಕ್ಷಕರು ಇವರ ಹಾಸ್ಯವನ್ನು ನೋಡಿರುತ್ತಾರೆ. ಆತ ಬದುಕನ್ನು ಅರ್ಥ ಮಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಆತನ ಪ್ರೆಸೆಂಟೇಶನ್ ಸ್ಕಿಲ್ ಸಾಟಿ ಇಲ್ಲದ್ದು. ಅವರ ಹಾಸ್ಯಗಳನ್ನು ನೋಡುತ್ತಿದ್ದರೆ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ದಂಧೆಯ ಜನ ತಮ್ಮ ಸುತ್ತಲಿನ ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳನ್ನು ನಿರಂತರ ಗಮನಿಸುತ್ತಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇಂತಹ ಮಾಹಿತಿಗಳನ್ನು ತುರ್ತಾಗಿ ತಮ್ಮ ಸರಕಾಗಿ ಮಾರ್ಪಡಿಸಿಕೊಳ್ಳುವ ಕಲೆಗಾರಿಕೆ, ಬೇಕಾಗುತ್ತದೆ. ಮುಂಬೈ ಲೋಕಲ್ ರೈಲುಗಳ ಬಗ್ಗೆ ತುಂಬ ಪರಿಣಾಮಕಾರಿಯಾಗಿ ಮಾತನಾಡುವ ರಾಜು ಖಾಲಿ ಬೋಗಿಗಳಲ್ಲಿ ಮೇಲಿನ ಹಿಡಿಕೆಗಳ ತೊನೆದಾಟದಿಂದ ಹಿಡಿದು ಸಣ್ಣ ಸಣ್ಣ ವಿವರಗಳನ್ನು ತೋರಿಸುವದನ್ನು ನೋಡಿಯೇ ಅನುಭವಿಸಬೇಕು. ನೇತಾಗಳನ್ನು ಹಂಗಿಸುವುದರಲ್ಲಿ ನಿಸ್ಸೀಮರು ರಾಜು. ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ತಂದೆಯೊಬ್ಬನ ತಳಮಳಗಳನ್ನು ತುಂಬಾ ನವಿರಾಗಿ ಚಿತ್ರಿಸುತ್ತಾ ಒಂದು ಹಂತದಲ್ಲಿ ನಮ್ಮ ಕಣ್ಣುಗಳನ್ನೂ ತೇವಗೊಳಿಸಿಬಿಡುತ್ತಾರೆ. ಘಟನೆಯ ಪಾತ್ರಗಳ ಭಾವದ ಜೊತೆ ನಿರ್ಜೀವ ವಸ್ತುಗಳಿಗೂ ಸಂವೇದನೆಗಳಿವೆಯೇನೋ ಎಂಬಂತೆ ಅಭಿವ್ಯಕ್ತಿಸುವ ರಾಜು ನಮ್ಮ ಜಯಂತ ಕಾಯ್ಕಿಣಿಯವರ ಬರಹಗಳನ್ನು ನೆನಪಿಗೆ ತರುತ್ತಾರೆ. ಒಂದುಸಲ ನೋಡಿಬಿಡುವ ಆಸೆಯಾದರೆ, ನಿಮಗೆ ಹಿಂದಿ ಅರ್ಥವಾಗುತ್ತಿದ್ದರೆ, ಯೂ ಟ್ಯೂಬ್ ನಲ್ಲಿ ‘ರಾಜು ಶ್ರೀವಾಸ್ತವ್’ ಎಂದೊಮ್ಮೆ ಹೊಡೆದು ನೋಡಿ. ನಮ್ಮ ನಗೆಗಾರರು ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ ಅನ್ನಿಸೀತು. ಸ್ಯಾಂಪಲ್ಲಿಗೆ ಕೆಳಗಡೆ ಲಿಂಕ್ ಕ್ಲಿಕ್ ಮಾಡಿ ನೋಡಿ.
http://uk.youtube.com/watch?v=5e6-PRoOhV8
ಕೊನೆಯ ಮಾತು. ನಮ್ಮಲ್ಲಿ ಹಾಸ್ಯಪ್ರಜ್ಞೆ ಎಂಬುದು ಮೊದಲಿಗಿಂತ ಬೆಳೆದಿದೆಯೋ, ಅಳಿದಿದೆಯೋ ಎನ್ನುವುದು ಪ್ರತ್ಯೇಕ ಚರ್ಚೆಯಾಗಬಲ್ಲ ವಸ್ತು. ಆದರೆ ಹಾಸ್ಯವನ್ನು ಸ್ವೀಕರಿಸುವ ಪ್ರೇಕ್ಷಕನಲ್ಲಂತೂ ಗಣನೀಯ ಬದಲಾವಣೆಗಳಾಗಿವೆ. ಹಳೇ ರಾಜ್ ಕುಮಾರ್ ಚಿತ್ರಗಳಲ್ಲಿನ ನರಸಿಂಹರಾಜು ಹಾಸ್ಯ ವರ್ತಮಾನದ ಪ್ರೇಕ್ಷಕನಿಗೆ ಅಷ್ಟಾಗಿ ಒಗ್ಗದಿರುವುದು ಪ್ರೇಕ್ಷಕನ ನಿರೀಕ್ಷೆಗಳಲ್ಲಾದ ಬದಲಾವಣೆಗಳನ್ನು ತೋರಿಸುತ್ತದೆ.
ಕನ್ನಡದಲ್ಲಿ ಇವತ್ತು ನಿಂತು ನಗಿಸುವುದರಲ್ಲಿ ಶ್ರೇಷ್ಠರು ಇದ್ದಾರಾದರೆ ಅದು ಮಾಸ್ಟರ್ ಹಿರಣ್ಣಯ್ಯನವರೇ. ಆದರೆ ಅವರನ್ನು ಈ ಪ್ರಾಕಾರಕ್ಕೆ ಪೂರ್ತಿ ಸೇರಿಸಲಾಗುವುದಿಲ್ಲ. ಅವರ ವ್ಯಾಪ್ತಿ ಅದಕ್ಕಿಂತಲೂ ದೊಡ್ಡದು.
-ಚಿನ್ಮಯ.