Friday, May 15, 2009

ರಿಸೆಶನ್ ವಿಷಘಳಿಗೆಯೂ ಮತ್ತು ಟೆಕ್ಕಿಗಳ ಬವಣೆಯೂ....

(ಇತ್ತೀಚಿಗೆ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)
ಪ್ರತಿ ಆರೇಳು ವರ್ಷಗಳಿಗೊಮ್ಮೆ ರಿಸೆಶನ್ ಗುಮ್ಮ ಬರುವುದಂತೂ ಖಾತ್ರಿಯಾಯಿತು. ಖಾತ್ರಿ ಇಲ್ಲದ್ದು ನಮ್ಮ ಉದ್ಯೋಗಗಳಷ್ಟೆ. ಇದು ಎಲ್ಲಿಂದ ಬರುತ್ತದೆ ಮತ್ತೆ ಹೇಗೆ ಹೋಗುತ್ತದೆ ಎಂಬುದರ ಬಗ್ಗೆ ನಿಖರ ವಿವರಗಳಿಲ್ಲ. ಭಾನಗಡಿ ಆದಮೇಲೆ ಗಂಟೆಗಟ್ಟಲೇ ಕೊರೆಯುವ ಆರ್ಥಿಕ ವಿಶ್ಲೇಷಕರ ಮಾತುಗಳು ವಿಶ್ವಾಸ ಮೂಡಿಸುವುದಿಲ್ಲ. ಜ್ಯೋತಿಷಿಗಳ ಭಾನುವಾರದ ಭವಿಷ್ಯಕ್ಕೂ ಇವರ ಮಾತುಗಳಿಗೂ ಅಂತಹ ವ್ಯತ್ಯಾಸ ತೋರುವುದಿಲ್ಲ. ಕೆಲವರ ಪ್ರಕಾರ ನಾವು ಆಗಲೇ ತಳ ತಲುಪಿಯಾಗಿದೆ. ಇನ್ನೇನಿದ್ದರೂ ಮೇಲಕ್ಕೇರುವುದು ಮಾತ್ರ. ಇನ್ನು ಕೆಲವರ ಪ್ರಕಾರ ಇದಿನ್ನೂ ಪ್ರಾರಂಭ, ತಳ ಇನ್ನೂ ಬಾಕಿ ಇದೆ. ಅವರವರ ಭಾವಕ್ಕೆ ಅವರವರ ಬಾವಿ.
ಗಜ ಗಾತ್ರದ ಉದ್ಯೋಗಿಗಳ ಸೇನೆ ಹೊಂದಿದ್ದ ಕಂಪನಿಗಳ ‘ಡಯಟಿಂಗ್ ’ ಪ್ರಾರಂಭವಾಗಿದೆ. ಇವರೂ VLCC ಯಂತೆ before – after ಬೋರ್ಡ್ ಹಾಕಿಕೊಳ್ಳಬೇಕಾಗಬಹುದು. ದೊಡ್ಡ ಸಂಸ್ಥೆಗಳಲ್ಲಿ, ‘’people have to sacrifice’’ ಎಂಬಂತಹ ನುಣ್ಣನೆಯ, ಕುತ್ತಿಗೆ ಕೊಯ್ಯುವ ಸಂದೇಶಗಳು ಉದ್ಯೋಗಿಗಳಿಗೆ ತಲುಪಲಾರಂಭಿಸಿವೆ. ಉದ್ಯೋಗಿಗಳಲ್ಲಿ ಪರಸ್ಪರ ಅಪನಂಬಿಕೆ, ಅಸೂಯೆ ಏರ್ಪಡುವ ನಂಜಿನ ಕಾಲ ಈ ರಿಸೆಶನ್ ಅವಧಿ. ಹಿರಿಯಣ್ಣ – ಗಿರಿಯಣ್ಣ – ಕಿರಿಯಣ್ಣ ಎಂಬ ಭೇದ ವಿಲ್ಲದೇ ಎಲ್ಲರಿಗೂ ‘ಶಿಕಾರಿ’ ಯಾಗುವ ವಿಚಿತ್ರ ಭಯ. ಎಲ್ಲ ಕಂಪನಿಗಳಲ್ಲಿಯೂ low performers ಎಂಬ ಮಿಕಗಳನ್ನು ಬೀಳಿಸುವ ನಾಟಕ. ನಿಜಕ್ಕೂ ಈ ಸಂದರ್ಭದಲ್ಲಿ ಅಗತ್ಯವಿದ್ದ Team building ನಂತಹ ಚಟುವಟಿಕೆಗಳಿಗೆ ಕಂಪನಿಗಳಲ್ಲಿ ಈಗ ಬಜೆಟ್ ಇಲ್ಲ. ಜಗತ್ತಿನೆಲ್ಲೆಡೆ ಒಂದು ಬಗೆಯ ಖಿನ್ನತೆ ಆವರಿಸಿದೆ. ಬಹುಶಃ ಈಗ ಒಳ್ಳೆಯ ಆದಾಯವಿರುವುದು ಆಸ್ಪತ್ರೆಗಳಿಗೆ ಮಾತ್ರವೇನೊ. ಆಟೋಮೋಟಿವ್ ಕ್ಷೇತ್ರದಲ್ಲಿರುವ ನನಗೆ ದಿನ ಬೆಳಿಗ್ಗೆ ಎದ್ದು ಇವತ್ತು ಯಾವ ಕಾರು ಕಂಪನಿಯ ಯಾವ ಶಾಖೆ ಮುಳುಗಿತು ಎಂಬುದನ್ನು ನೋಡುವುದೇ ಕೆಲಸವಾಗಿದೆ. ಮೊನ್ನೆ ಕಂಪನಿಯ ರಿಸೆಪ್ಶನ್ ಹಾದು ಹೋಗುತ್ತಿದ್ದೆ. ಪರ್ಚೇಸ್ ಡಿಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವ ಯುವತಿಯೊಬ್ಬರು ಅಲ್ಲಿ ನಿಂತಿದ್ದರು. ನಾನು ಸಹಜವಾಗಿ ಆಕೆಯ ಬಳಿ ನೆಡೆದು ಮಾತನಾಡಿಸಿದೆ. ಅವಳು “ನಾನು ಕೆಲಸ ಕಳೆದುಕೊಂಡಿದ್ದೇನೆ, ಇಂದು ನನ್ನ ಕಡೆಯ ದಿನ” ಎಂದಳು. ಆ ಕ್ಷಣಕ್ಕೆ ನನ್ನಲ್ಲಿ ಹತ್ತಾರು ಭಾವನೆಗಳು ಮೂಡಿ ಮರೆಯಾದವು. ನಿಮ್ಮಂತವರು ನಮ್ಮ ದೇಶಕ್ಕೆ ಬಂದು ನಮ್ಮ ಕೆಲಸ ಕದಿಯುತ್ತಿದ್ದೀರಿ ಎಂದು ಆಕೆ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿರಬಹುದೆನ್ನಿಸಿತು. ಹೀಗೆ ಕೆಲಸ ಕಳೆದುಕೊಂಡವರ ಬಳಿ ಮಾತನಾಡುತ್ತಾ ನಿಲ್ಲುವುದು ಸುರಕ್ಷಿತ ಅಲ್ಲವೇನೊ ಎಂದು ಕೂಡ ಅನ್ನಿಸಿದ್ದನ್ನು ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಾಚಿಕೆಯೂ ಆಗುತ್ತದೆ. ಈ ಬಾರಿ ರಿಸೆಶನ್ ನಲ್ಲಿ ಕಾರು ತಯಾರಕರ ಸಂಸ್ಥೆಗಳು ಬಲವಾದ ಪೆಟ್ಟು ತಿಂದಿವೆ. ಸರಕಾರಗಳ ಕೊಡುತ್ತಿರುವ ಪಾರುಗಾಣಿಕೆಯ ಪ್ಯಾಕೇಜ್ ಗಳಿಂದ ಕೆಲ ತಿಂಗಳುಗಳ ಕಾಲ ಸಂಬಳ ಕೊಡಬಹುದಷ್ಟೆ. ಮುಂದೇನು? ಮಾಡಿಟ್ಟ ಕಾರುಗನ್ನೇ ಕೊಳ್ಳುವವರಿಲ್ಲದಿರುವಾಗ ಇವರು ಹೊಸ ಉತ್ಪಾದನೆ ಯಾಕಾಗಿ ಮಾಡಿಯಾರು? ಈ ಕೊಳ್ಳುವವನ ಕೈ ಬಲ ಪಡಿಸುವವರು ಯಾರು? ಸದ್ಯಕ್ಕೆ ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳು.
ಬರಾಕ್ ಒಬಾಮ, ಗಾರ್ಡನ್ ಬ್ರೌನ್ ಮುಂತಾದವರು ಸ್ವದೇಶಿ ಮಂತ್ರ ಆರಂಭಿಸಿದ್ದಾರೆ. ಅಮೆರಿಕಾದ ಹೆಚ್ ಒನ್ ಬಿ ವಿಸಾ, ಬ್ರಿಟನ್ ನ ಟೈರ್ ಒನ್ ವಿಸಾಗಳಲ್ಲಿ ಇತ್ತೀಚೆಗೆ ಅಳವಡಿಸಲಾಗುತ್ತಿರುವ ಕಠಿಣ ಷರತ್ತುಗಳು ಹೊರಗಿನವರು ಅದರಲ್ಲೂ ಭಾರತೀಯ ತಂತ್ರಜ್ಞರು ವಲಸೆ ಬರುವುದನ್ನು ತಡೆಯಲೆಂದೇ ರೂಪುಗೊಂಡಂತಿವೆ. ನಮ್ಮ ನೆಲದ ಉದ್ಯೋಗಗಳಲ್ಲಿ ಪಕ್ಕದ ತಮಿಳರನ್ನು ಸಹಿಸಲಾಗದ ನಮಗೆ ಇವರ ಕ್ರಮವನ್ನು ವಿಮರ್ಶಿಸಲು ನೈತಿಕತೆ ಸಾಲುವುದಿಲ್ಲ. ಬ್ರಿಟನ್, ಅಮೇರಿಕಾಗಳಲ್ಲಿ, ಕೆಲಸ ಕಳೆದುಕೊಂಡ ಸಂತ್ರಸ್ತರನ್ನು ಬೀದಿಗೆ ಬೀಳದಂತೆ ತಡೆಯಲು ಸರಕಾರದಿಂದ ತಕ್ಕ ಮಟ್ಟಿನ ಹಣಕಾಸಾದರೂ ಸಿಗುತ್ತದೆ. ಅವೆಲ್ಲಕ್ಕಿಂತ ಮುಖ್ಯ ಈ ದೇಶಗಳಲ್ಲಿ dignity of labour ಇಲ್ಲದಿರುವುದು. ಬಹುಶಃ ಇದು ಚಾರ್ವಾಕ ಸಂಸ್ಕೃತಿಯ ಒಳ್ಳೆಯ ಅಂಶಗಳಲ್ಲಿ ಪ್ರಮುಖವಾದದ್ದು ಅನ್ನಿಸುತ್ತದೆ. ನಮ್ಮಲ್ಲಿ ಕೆಲಸ ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್ ದಿನಸಿ ಅಂಗಡಿ ನೆಡೆಸುವ ವಾತಾವರಣ ಉಂಟೇ?

ಸಾಫ್ಟ್ ವೇರ್ ವಿಚಾರ ಏಕೆ ಪ್ರಸ್ತಾಪ ಮಾಡಿದೆನೆಂದರೆ, ತಂತ್ರಾಂಶ ಪರಿಣಿತರು ಜಾಗತಿಕ ಆರ್ಥಿಕ ಸಂಕಟಗಳಿಗೆ ಮೊದಲು ಬಲಿಯಾಗಲ್ಪಡುವ ಅತ್ಯಂತ ಸೂಕ್ಷ್ಮ ವರ್ಗ ಎಂಬುದು ಕಳೆದ ರಿಸೆಶನ್ ಗಳಿಂದ ವೇದ್ಯವಾಗಿದೆ. ಅದರಲ್ಲೂ ಭಾರತಕ್ಕೆ ಸಂಬಂಧಪಟ್ಟಂತೆ ಇದು ಇನ್ನೂ ಸೂಕ್ತವಾಗಿ ಅನ್ವಯಿಸುತ್ತದೆ. ಭಾರಿ ವೇತನಕ್ಕೆ ಅಷ್ಟೇ ಗಾತ್ರದ ರಿಸ್ಕ್ ಎಂಬ ಜ್ವಾಲಮುಖಿ ಸಮಾನಾಂತರವಾಗಿ ಆದರೆ ಸುಪ್ತವಾಗಿ ಹರಿಯುತ್ತಿರುತ್ತದೆ. ಅದು ಯಾವಾಗಲೂ ಸ್ಫೋಟಿಸಬಹುದು. ಯಾರಿಗೂ ಅದರ ಮೇಲೆ ನಿಯಂತ್ರಣವಿಲ್ಲ. ಲೇಮನ್ ಬ್ರದರ್ಸ್ ನಂತಹ, ಬ್ಯಾಂಕುಗಳಿಗೇ ಸಾಲ ಕೊಡುವ ಅಪ್ಪ ಬ್ಯಾಂಕುಗಳು ಮುಳುಗುವ ಚಿಕ್ಕದೊಂದು ಸೂಚನೆಯೂ ಇರಲಿಲ್ಲ. ಬ್ಯಾಂಕಿಂಗ್ ಕ್ಷೇತ್ರವನ್ನು ಅವಲಂಬಿಸಿದ ಹಲವು ಐಟಿ ಕಂಪನಿಗಳಿಗೆ ಒಂದಾದ ಮೇಲೊಂದು ವಿದೇಶಿ ಬ್ಯಾಂಕ್ ಗಳು ಪತನವಾಗುತ್ತಿರುವುದು ಅತೀವ ಕಳವಳದ ವಿಷಯವಾಗಿದೆ. ಒಂದು ಕಾಲದಲ್ಲಿ ಸಾಮಾನ್ಯನಲ್ಲಿ ಬೆರಗು ಮೂಡಿಸಿದ್ದ ಸಾಫ್ಟ್ ವೇರ್ ಈಗೀಗ ಬೆವರು ಹುಟ್ಟಿಸತೊಡಗಿದೆ. ನಾನು ಹೀಗೀಗೆ, ಇಂತಿಪ್ಪ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದರೆ “ಹೇಗೆ? ನಿಮ್ದು ಪರ್ವಾಗಿಲ್ವಾ?” ಎಂದು ಕಣ್ಣು ಕಿರಿದುಗೊಳಿಸಿ ಉಚಿತ ಅನುಕಂಪ ವ್ಯಕ್ತಪಡಿಸಲಾರಂಭಿಸಿಬಿಡುತ್ತಾರೆ. ಇವರ ಹಾರಾಟ ನೋಡಿ ಬೇಸತ್ತ ಇತರ ಕ್ಷೇತ್ರಗಳ ಹೆಚ್ಚಿನ ಅನುಭವವುಳ್ಳ ಕಡಿಮೆ ಪಗಾರಿನ ಜನಕ್ಕೆ ಒಳಗೊಳಗೇ ಖುಶಿಯಾಗುತ್ತಿದ್ದರೂ, ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಮಗ ಇಂಜಿನಿಯರಿಂಗ್ ಓದಿ ಮುಗಿಸುವ ಹೊತ್ತಿಗೂ ಪರಿಸ್ಥಿತಿ ಸರಿಯಾಗದಿದ್ದರೆ ಏನು ಗತಿ ಎಂಬ ಆತಂಕ ಮಾತಾಡಗೊಡುವುದಿಲ್ಲ. ಇಂಜಿನಿಯರಿಂಗ್ ಎಂದರೆ ಸಾಫ್ಟ್ ವೇರ್ ಎಂದು ಮತ್ತೆ ಹೇಳಬೇಕಾಗಿಲ್ಲವಲ್ಲ.
ಇಲ್ಲೊಂದು ಸಂಗತಿ ಗಮನಿಸಬೇಕಾದದ್ದಿದೆ. ನೌಕರಿ ಮಾಡಿಯೂ, ಲಂಚ ತಗೆದುಕೊಳ್ಳದೆಯೂ ಶ್ರೀಮಂತನಾಗಬಹುದೆಂದು ತೋರಿಸಿಕೊಟ್ಟ ಐಟಿ ಎಂಬುದು ಈ ಎರಡು ದಶಕಗಳಲ್ಲಿ ಭಾರತೀಯ ಸಮಾಜದಲ್ಲಿ ಸಮೃದ್ಧಿ, ಪ್ರತಿಷ್ಠೆ, ವಿಲಾಸ, ಅಸೂಯೆ, ದರ್ಪ ಇವೆಲ್ಲದರ ಸಂಕೇತವಾಗಿ ಬೆಳೆದು ನಿಂತಿದೆ. ಯುವಕ /ಯುವತಿಯರಲ್ಲಿ ಹಣ ಓಡಾಡತೊಡಗಿದಾಗ ಸಹಜವಾಗಿಯೇ ಕೊಳ್ಳುಬಾಕರಾದರು. ಪಾಶ್ಚಾತ್ಯರ ಗಾಳಿ ಸೋಂಕಿದ್ದರಿಂದ ಕೊಂಚ ಪ್ರಮಾಣದ ಚಾರ್ವಾಕತನವೂ ಬಂತು. ಅದರಿಂದಾಗಿ ಸಾಮಾನ್ಯನ ಬದುಕು ದುಸ್ತರವಾಯಿತು. ಒಳ್ಳೆತನ, ಸಂಸ್ಕೃತಿ, ನ್ಯಾಯವಂತಿಕೆ ಇವುಗಳನ್ನೆಲ್ಲ ಬಡತನಕ್ಕಷ್ಟೇ ಬೆಸೆಯುವ ಟಿಪಿಕಲ್ ಭಾರತೀಯ ಮನಸ್ಸು ಟೆಕ್ಕಿಗಳನ್ನು ಏಕಕಾಲಕ್ಕೆ ಬೆರಗು, ಅಸಹನೆ ಮತ್ತು ಅಸಮಾಧಾನದೊಂದಿಗೆ ನೋಡಲಾರಂಭಿಸಿದ್ದು ಅನಿರೀಕ್ಷಿತವಲ್ಲ. ಈ ಧಾಟಿಯ ಯೋಚನಾ ಕ್ರಮ ಭಾರತೀಯರಿಗೆ ತಲಾಂತರದಿಂದ ಬಂದ ಬಳುವಳಿ. ಶತಮಾನಗಳಿಂದ ಬಡತನವನ್ನೇ ಉಸಿರಾಡುತ್ತಾ ಬಂದ ನಮಗೆ ಶ್ರೀಮಂತಿಕೆಯ ಬಗ್ಗೆ ಅದಮ್ಯ ಆಸೆಯಿದೆ ಆದರೆ ಶ್ರೀಮಂತರ ಬಗ್ಗೆ ಅಪಾರ ಅಸಹನೆ ಇದೆ. ಬಡವರ ಬಗೆಗಿನ ಅನುಕಂಪವೇ ನಮ್ಮ ಒಳ್ಳೆತನಕ್ಕೆ ಪುರಾವೆ. ಅನುಕಂಪದ ಆಚೆ ನೆಡೆದು ಬಡವರಿಗೆ ಸಹಾಯಹಸ್ತ ಚಾಚುವ ಶಕ್ತಿ ಇಲ್ಲದ್ದು ನಮ್ಮ ಮಿತಿ ಮತ್ತು ಆಸಕ್ತಿ ಇಲ್ಲದ್ದು ಆಡಳಿತ ಯಂತ್ರದ ಬೇಜವಬ್ದಾರಿತನ.
ಆದರೆ ಉದಾರಿಕರಣದಿಂದೀಚೆಗೆ ಭಾರತದಲ್ಲಿ ನ್ಯಾಯಯುತವಾಗಿ ಹಣಗಳಿಸಬಹುದಾದಂತಹ ಮಾರ್ಗಗಳು ಹೇರಳವಾಗಿ ತೆರೆದುಕೊಂಡಿದ್ದನ್ನು ನಾವು ಉಪೇಕ್ಷಿಸುವಂತಿಲ್ಲ. ಹವಾನಿಯಂತ್ರಿತ ಕಟ್ಟಡಗಳಲ್ಲಿ ಕುಳಿತು ಸಾವಿರಾರು ಜನಕ್ಕೆ ಉದ್ಯೋಗ ನೀಡುವಂತ ಯೋಜನೆ ರೂಪಿಸಬಲ್ಲ ಶ್ರೀಮಂತ ಉದ್ಯಮಿ ಯನ್ನು ಕೊಂಚವೂ ಸಾಮಾಜಿಕ ಜವಾಬ್ದಾರಿಗಳಿಲ್ಲದ, ಕಾರ್ಮಿಕರ ರಕ್ತ ಹೀರುವ ಕ್ರೂರ ಬಂಡವಾಳಶಾಹಿಯನ್ನಾಗಿಯೇ ಭಾವಿಸಬೇಕಿಲ್ಲ.
ಹೀಗೆ ಗಳಿಸಿದ ದೊಡ್ಡ ವೇತನ, ಆ ಮೂಲಕ ಸೃಷ್ಟಿಸಿಕೊಂಡ ಸಂಪತ್ತು ಐಟಿ ಉದ್ಯೋಗಿಗಳಲ್ಲಿ ಸ್ವಾಭಿಮಾನದ ಸಂಕೇತವಾಗಿ, ಕೆಲವೆಡೆ ದರ್ಪವಾಗಿಯೂ ಪ್ರಕಟಗೊಂಡಿದ್ದರೆ ಆಶ್ಚರ್ಯಪಡಬೇಕಿಲ್ಲ. ಕಂಪನಿಯ ಬ್ಯಾಡ್ಜ್ ಕುತ್ತಿಗೆಗೆ ನೇತಾಕಿಕೊಂಡು ಕಂಪನಿ ಬಸ್ಸಿನಿಂದ ಇಳಿಯುವವರ ಬಿಗುಮಾನ ನೋಡಿ ‘ಇವರು ಮನುಷ್ಯರಿಗಿಂತ ತುಸು ಮೇಲೆ’ ಎಂದು ಭಾವಿಸಿದ್ದ ಜನಕ್ಕೆ ಕ್ರಮೇಣ ಇವ್ರು ಮಾಡುವ ಕೆಲಸಕ್ಕೆ ರ್ಯಾಂಕು – ಗೀಂಕು ಬೇಡವಂತೆ, ಅದು ಕಳಪೆ ಕೆಲಸವಂತೆ ಎಂದೆಲ್ಲ ಅರೆಬರೆ ಮಾಹಿತಿ ತಿಳಿದ ಮೇಲೆ ಒಹೋ ಇಷ್ಟೇನಾ? ಎಂಬಂತಾಗಿದ್ದು ಸುಳ್ಳಲ್ಲ. ಪಶ್ಚಿಮದವರ ಸುಖಕ್ಕಾಗಿ ಹಗಲು ರಾತ್ರಿಯೆನ್ನದೇ ಸಮಯದ ಹಂಗು ತೊರೆದು ಪಶ್ಚಿಮದವರ ಸಮಯದ ಗೊಂಬೆಯಂತೆ ದುಡಿಯುವ ಐಟಿಗ ಇವತ್ತು ಕೆಲಸ ಕಳೆದುಕೊಂಡರೂ ಸಮಾಜದ ಅನುಕಂಪ ಗಿಟ್ಟಿಸುವ ಸ್ಥಿತಿಯಲ್ಲಿಲ್ಲ. ದಾರಿಯಲ್ಲಿ ಎದುರು ಸಿಗುವ ಟೆಕ್ಕಿಯನ್ನು ಕೇಳಿ ನೋಡಿ, ಇವತ್ತಿನ ಪರಿಸ್ಥಿತಿಯಲ್ಲಿ ತನ್ನ ಉದ್ಯೋಗದ ಮುಂದಿನ ಎರಡು ತಿಂಗಳಿನ ಭವಿಷ್ಯ ಆತನಿಗೆ ತಿಳಿದಿಲ್ಲ. ಆದರೆ ಬಹುತೇಕರು ಹದಿನೈದು - ಇಪ್ಪತ್ತು ವರ್ಷಗಳ ಹೌಸಿಂಗ್ ಲೋನ್ ಹೊಂದಿದ್ದಾರೆ.
ಮರೆಯಬಾರದ ಸಂಗತಿಯೆಂದರೆ, ಆರ್ಥಿಕವಾಗಿ ದಿವಾಳಿಯಂಚಿನಲ್ಲಿದ್ದ ಭಾರತವನ್ನು ಐಟಿ ಮೇಲಕ್ಕೆತ್ತಿದ್ದಲ್ಲದೇ ಜಾಗತಿಕವಾಗಿ ಭಾರತಕ್ಕೊಂದು ಪ್ರಮುಖ ಸ್ಥಾನ ಒದಗಿಸಿಕೊಟ್ಟಿದೆ. ಐಟಿ ಉದ್ಯೋಗಿಗಳು ಕಟ್ಟುವ ಕಂದಾಯದ ಮೊತ್ತ ಇವತ್ತಿನ ಸರಕಾರಕ್ಕೆ ಬಹಳ ದೊಡ್ಡ ಆದಾಯ. ಮುಂಬರುವ ದಶಕಗಳಲ್ಲಿ ರಿಸೆಶನ್ ಎಂಬ ಅತಿಥಿ ಅಗಾಗ ಬರುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆಯಾದ್ದರಿಂದ ಟೆಕ್ಕಿಗಳು ತಮ್ಮ ದೊಡ್ಡ ಸಂಬಳದ ಸಣ್ಣಭಾಗವೊಂದನ್ನು ‘ರಿಸೆಶನ್ ತುರ್ತು ನಿಧಿ‘ ಯಾಗಿ ಕೂಡಿಡುತ್ತಾ ಹೋಗುವುದು ಅನಿವಾರ್ಯವೇನೊ. ಸರಕಾರದ ಕಣ್ಣಲ್ಲಿ ಶಾಶ್ವತ ಬಡವರಾಗಿ ಆದಾಯ ತೆರಿಗೆ ತಪ್ಪಿಸಿಕೊಳ್ಳುತ್ತಾ ಐಟಿಯವರನ್ನು ಬೈಯ್ಯುವ ಜನಕ್ಕೆ ಮನೆ ಮುಂದಿನ ರೋಡಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಅರಿವಿದ್ದರೆ ಸಾಕು.
-ಚಿನ್ಮಯ ಭಟ್

No comments: