Sunday, May 24, 2009

ಸುಲೋಕಸಭೆ

(‘ಕೆಂಡಸಂಪಿಗೆ’ ಯಲ್ಲಿ ಪ್ರಕಟವಾಗಿದ್ದು)
ಮಳೆ ನೆಗಸು ಜಡಿದು ನಿಂತಂತಿದೆ. ಎದುರುಗಡೆ ಏನಿದೆ ಎಂಬುದು ನಿಚ್ಚಳವಾಗಿ ಕಾಣತೊಡಗಿದೆ. ಯಾವುದೇ ಗೊಂದಲಗಳಿಲ್ಲ. ಕೊನೆಗೂ ಭಾರತೀಯ ಮತದಾರ ಎಚ್ಚೆತ್ತುಕೊಂಡಿದ್ದಾನೆ ಎಂಬುದೇ ಸಮಾಧಾನಕರ ಸಂಗತಿ. ಫಲಿತಾಂಶದ ನಂತರದ ರಾಜಕೀಯ ಹಾದರಗಳಿಗೆ ಈ ಸಲ ಅವಕಾಶ ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ಕಾಂಗ್ರೆಸ್ 200ಕ್ಕೂ ಹೆಚ್ಚು, ಮತ್ತು ಭಾಜಪ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿರುವುದನ್ನು ಗಮನಿಸಿದರೆ. ಕ್ರಮೇಣ ರಾಷ್ಟ್ರೀಯ ಪಕ್ಷಗಳ ವ್ಯವಸ್ಥೆಯೆಡೆಗೇ ಮತ್ತೆ ಮತದಾರ ಒಲವು ತೋರುತ್ತಿದ್ದಾನೆ ಅನ್ನಿಸುತ್ತಿದೆ. ಒಳ್ಳೆಯ ಬೆಳವಣಿಗೆಯೇ ಸರಿ. ಆಳುವವರಿಗೆ ಮದವೇರುವಷ್ಟು ಸಂಖ್ಯಾಬಲವೂ ಇಲ್ಲ. ವಿರೋಧಿಗಳದ್ದು ತೀರ ಕಡಿಮೆ ಎನ್ನುವ ಸಂಖ್ಯೆಯೂ ಅಲ್ಲ. ಯಾರು ಗೆದ್ದರು ಯಾರು ಸೋತರು ಎಂಬುದನ್ನುಒಮ್ಮೆ ಬದಿಗಿರಿಸಿ ನೋಡಿದರೆ ಒಂದರ್ಥದಲ್ಲಿ ಇದು ಸಮತೋಲಿತ ಸುಲೋಕಸಭೆ.
ತೃತೀಯರಂಗ, ಚತುರ್ಥರಂಗ ಎಂಬ ಅವಕಾಶವಾದಿಗಳಿಗೆ ಈ ಸಲ ಮರ್ಮಕ್ಕೇ ಏಟು ಬಿದ್ದಿದೆ. ಹೌದು ಇವರನ್ನು ಅವಕಾಶವಾದಿಗಳೆನ್ನದೇ ಬೇರೆ ಹಾದಿ ಇಲ್ಲ. ಅತಂತ್ರ ಲೋಕಸಭೆ ಎಂಬುದು ಇವರು ನಿರಂತರ ಬಯಸುವ ಭಾಗ್ಯ. ಸೆಕ್ಯುಲರ್ ಎಂಬುದು ಇವರಿಗೆ ಅಂಗಿ ಇದ್ದಂತೆ. ತೊಟ್ಟರೆ ಸಮನ್ವಯಿ, ಕಳಚಿದರೆ ಸನಾತನಿ. (ನಮ್ಮ)ರಾಜ್ಯದಲ್ಲಿ ಜಾತಿ ರಾಜಕಾರಣವನ್ನೇ ಮಾಡಿಕೊಂಡಿದ್ದ ಜಾತ್ಯತೀತರಿಗೆ ಇನ್ನೈದು ವರ್ಷ ಅಂತಹ ಕೆಲಸವಿಲ್ಲ. ದೆಹಲಿಯಲ್ಲಿ ಇವರನ್ನು ಕೇಳುವವರು ಯಾರೂ ಇಲ್ಲ. ಇಲ್ಲಿ ಮೊದಲೇ ಕೆಲಸ ಕಳೆದುಕೊಂಡಾಗಿದೆ. ಅದರೂ ಛಲದಂಕಮಲ್ಲ ಹಿರಿಗೌಡರು ಶಕ್ತಿಮೀರಿ ವಶೀಲಿಬಾಜಿ, ಚೌಕಾಶಿ ನೆಡೆಸುತ್ತಾರೆ. ರಜ್ಯದಲ್ಲಿ ಗೆದ್ದ ಕಾಂಗ್ರೆಸ್ಸಿಗರನ್ನೇ ಕಡೆಗಣಿಸಿ, ಕುಮಾರಸ್ವಾಮಿಗೆ ಕೇಂದ್ರ ಮಂತ್ರಿಗಿರಿ ಕೊಡಮಾಡಿದರೆ, ಮುಳುಗುವ ಹಡಗು ಪೂರ್ತಿ ಮುಳುಗಿದಂತೆ ಲೆಖ್ಖ. ಲಾಲೂ, ಪಾಸ್ವಾನ್ ಸ್ಥಿತಿ ಇನ್ನೂ ಶೋಚನೀಯ. ಸದ್ಯಕ್ಕೆ ಅವರಿಗೆ ಚೇತರಿಕೆ ಇಲ್ಲ. ಎಡಪಂಥೀಯರಂತೂ ಬಂಗಾಳ, ಕೇರಳಗಳಲ್ಲೇ ಅಸ್ತಿತ್ವ ಕಳೆದುಕೊಂಡು ನಿರುದ್ಯೋಗಿ ಕಾಮ್ರೇಡ್ ಗಳಾಗಿದ್ದಾರೆ. ಕೇಂದ್ರದಲ್ಲಿ ಯಾವ ಸರ್ಕಾರವಿದ್ದರೂ ನಿಂತಲ್ಲಿ ಕೂತಲ್ಲಿ ಕಾಡುತ್ತಿದ್ದ ಚಿಲ್ಲರೆ ಸಮಯಸಾಧಕರು ಈ ಬಾರಿ ಬೇಡಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ತೃತೀಯ, ಚತುರ್ಥರಿಗೆ ಇನ್ನು ಕೆಲವರ್ಷ ರಿಸೆಶನ್. ಅಷ್ಟರಮಟ್ಟಿಗೆ ಈ ದೇಶ ಬಚಾವಾಗಿದೆ.
ಬಹುಮತ ತಲುಪಲು ಕೇವಲ ಬೆರಳೆಣಿಕೆಯ ಸೀಟುಗಳ ಅಗತ್ಯವಿರುವ ಯುಪಿಎ ಅತ್ಯಂತ ಸುಲಭವಾಗಿ ಸರ್ಕಾರ ರಚಿಸುವುದು ಮತ್ತು ಮನಮೋಹನ ಸಿಂಗ್ ಪ್ರಧಾನಿಯಾಗುವುದು ಖಚಿತವಾಗಿದೆ. ಈ ಬಾರಿ ಯುಪಿಎ, ಬಿಹಾರದಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ನೀತೀಶ್ ರನ್ನು ತಮ್ಮ ಹೊಸ ಸಾಥಿಯನ್ನಾಗಿ ಮಾಡಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಮಮತಾ, ಜಯಾ, ಕರುಣಾನಿಧಿ, ಮುಲಾಯಂ ಇವರುಗಳ ಹಳೇ ಚಾಳಿಯನ್ನು ಬಲ್ಲ ಕಾಂಗ್ರೆಸ್ಸಿಗೆ ನಿತೀಶ್ ಮತ್ತು ಓರಿಸ್ಸಾದ ನವೀನ್ ಪಟ್ನಾಯಕ್ ಜಂಟಲ್ ಮನ್ ಗಳಂತೆ ಕಂಡರೆ ಆಶ್ಚರ್ಯವಿಲ್ಲ.
ಎನ್ ಡಿ ಎ ಕಳೆದುಕೊಂಡಿದ್ದೆಷ್ಟು? ಯುಪಿಎ ಗಳಿಸಿದ್ದೆಷ್ಟು? ಕಾರಣಗಳು ಮತ್ತು ಅಂಕಿ ಅಂಶಗಳು ಬಹಳ ಆಸಕ್ತಿದಾಯಕವಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಬಾರಿಗಿಂತ ಎನ್ ಡಿಎ ಸುಮಾರು 20 ಸೀಟು ಕಡಿಮೆ ಗಳಿಸಿದೆ. ಅಂದರೆ ತೀರ ಕಳಪೆ ಸಾಧನೆಯೇನಲ್ಲ. ಆದರೆ ಯುಪಿಎ ಅದರಲ್ಲೂ ಕಾಂಗ್ರೆಸ್, ತೃತೀಯ ಮತ್ತು ಚತುರ್ಥ ರಂಗಗಳಿಂದ ಮತ್ತು ಕೆಲರಾಜ್ಯಗಳಲ್ಲಿ ಮಾತ್ರ ಭಾಜಪದಿಂದ ಗಣನೀಯವಾಗಿ ಮತಗಳನ್ನು ಕಸಿದಿದೆ. (ಕಳೆದ ಬಾರಿ , ಯುಪಿಎ: 218, ಎನ್ ಡಿ ಎ: 181 ಈ ಬಾರಿ, ಯುಪಿಎ : 262, ಎನ್ ಡಿ ಎ:160 ) ಬಹಳ ಸದ್ದು ಮಾಡಿದ್ದ ಮಾಜಿ ಸೂಪರ್ ಸ್ಟಾರ್ ಚಿರಂಜೀವಿ ದೊಡ್ಡ ಯಶಸ್ಸುಗಳಿಸದಿರುವುದು ದಕ್ಷಿಣಭಾರತದಲ್ಲಿ ಸಿನಿಮಾ ಮಂದಿಯ ಕ್ರೇಜ್ ಕಡಿಮೆ ಆಗತೊಡಗಿದ್ದರ ಸಂಕೇತ. ಮತದಾರ ಚುನಾವಣೆಯಿಂದ ಚುನಾವಣೆಗೆ ಪ್ರಬುದ್ಧನಾಗುತ್ತಿರುವುದು ನಿಚ್ಚಳ.
ಸೋಲು ಗೆಲುವುಗಳ ಹಿನ್ನೆಲೆಯನ್ನು ಕೊಂಚ ಗಮನಿಸೋಣ. 90ರ ದಶಕದಲ್ಲಿ ದೇಶದಲ್ಲಿ ಭಾಜಪದ ಅಲೆಯೊಂದು ಎದ್ದಿದ್ದನ್ನು ನೆನಪು ಮಾಡಿಕೊಳ್ಳಿ, ಅಗಲೇ ವಾಜಪೇಯಿ, ಅಡ್ವಾಣಿ ಸಾಕಷ್ಟು ವೃದ್ಧರಾಗಿದ್ದರೂ ಅವರ ಸಮರ್ಥ ನಾಯಕತ್ವದ ಬಗ್ಗೆ ಜನತೆಗೆ ಸಂಶಯಗಳಿರಲಿಲ್ಲ. ಜೊತೆಗೆ ಪ್ರಮೋದ್ ಮಹಾಜನ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿಯಂತಹವರ ಯುವ ಪಡೆಯನ್ನು ಜನ ಭರವಸೆಯ ಕಣ್ಣುಗಳಿಂದ ನೋಡಿದ್ದರು. ಆಗ ಭಾಜಪ ಯುವನಾಯಕರ ಪಕ್ಷವಾಗಿತ್ತು. ಕಾಂಗ್ರೆಸ್ ಮುದುಕರ ಪಕ್ಷವೆಂದು ಟೀಕೆಗೊಳಗಾಗಲ್ಪಟ್ಟಿತ್ತು. ಈಗ ಈ ವಿಷಯ ಪ್ರಸ್ತಾಪಿಸುವುದು ಈಗ ಏಕೆ ಮುಖ್ಯವಾಗುತ್ತದೆ ಎಂದರೆ, ಮೇಲೆ ಹೇಳಿದ ಭಾಜಪದ ನಾಯಕರೆಲ್ಲ ಮುದುಕರಾಗುತ್ತಿದ್ದಾರೆ. ಭರವಸೆಯ ಮುಂದಿನ ಪೀಳಿಗೆಯ ನಾಯಕರುಗಳೇ ಕಾಣುತ್ತಿಲ್ಲ. ಅದೇ ಕಾಂಗ್ರೆಸ್ ನೆಡೆಗೆ ನೋಡಿ, ಒಂದು ಆಕರ್ಷಕ ಯುವ ಪಡೆಯನ್ನೇ ನಿರ್ಮಿಸಿಕೊಂಡಿದೆ. ರಾಹುಲ್ ಗಾಂಧಿ, ಸಚಿನ್ ಪೈಲಟ್, ಮಿಲಿಂದ್ , ಜ್ಯೋತಿರಾದಿತ್ಯ ಸಿಂಧ್ಯಾ, ಕೃಷ್ಣ ಭೈರೆ ಗೌಡ ರಂತಹ ಭರವಸೆಯ ಯುವಮುಖಗಳು ಕಾಂಗ್ರೆಸ್ ಗೆ ಹೊಸ ರೂಪವನ್ನು ಕೊಟ್ಟಿವೆ. ಕೃಷ್ಣ ಭೈರೆಗೌಡ ಸೋತಿದ್ದಾರೆ ನಿಜ ಆದರೆ ಅವರು ಬೆಳೆಯುತ್ತಿರುವ ವೇಗ ನೋಡಿದರೆ ಒಂದಿಲ್ಲೊಂದು ದಿನ ಈತ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನಿಸದೇ ಇರಲಾರದು.
ಭಾಜಪ ವ್ಯಾಪಾರಸ್ತರ, ನೌಕರಸ್ತರ, ನಗರಜೀವಿಗಳ, ಮೆಲ್ವರ್ಗದವರ ಪಕ್ಷ ಎಂಬ ಸಾರ್ವರ್ತ್ರಿಕ ಅಭಿಪ್ರಾಯದಲ್ಲಿ ಸತ್ಯಾಂಶವಿದ್ದರೆ ಈ ಬಾರಿ ಭಾಜಪದ ವೈಫಲ್ಯಕ್ಕೆ ಇದೂ ಒಂದು ಮುಖ್ಯ ಕಾರಣವಾಗಿರಬಹುದಾಗಿದೆ. ಈ ಬಾರಿ ಕೇವಲ ಶೇ. 53 ಮತದಾನವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಚುನಾವಣೆಯ ಮಾರನೇ ದಿನವೇ ಅಡ್ವಾಣಿ ನೀಡಿದ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ಅಡ್ವಾಣಿ ಆಗಲೇ ಪೇಲವ ವದನರಾಗಿದ್ದರು. ‘ಈ ದೇಶದಲ್ಲಿ ಮತದಾನವನ್ನು ಹೇಗಾದರೂ ಮಾಡಿ ಕಡ್ಡಾಯ ಮಾಡಬೇಕು’ ಎಂಬ ಅವರ ಹೇಳಿಕೆಯ ಹಿಂದೆ ಗಾಢ ಆತಂಕ ಅಡಗಿತ್ತು. ಮತದಾನ ಮಾಡದೇ ಹೊಟೇಲು, ಸಿನಿಮಾ, ಪಿಕ್ ನಿಕ್ ಗಳಲ್ಲಿ ಕಾಲಕಳೆದ ವರ್ಗ ಯಾವುದೆಂಬುದು ಅವರಿಗೆ ಅರ್ಥವಾಗಿಹೋಗಿತ್ತು.
ಭಾಜಪದ ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಅವರ ಬಳಿ ಹೊಸ ಅಸ್ತ್ರ ಇಲ್ಲದಿರುವುದು. ಹಿಂದುತ್ವ ಹಪ್ಪು ಹಳಸಲಾಗಿ ಇವರ ಬಾಯಿಗಳೆಲ್ಲ ವಾಸನೆ ಹೊಡೆಯಲಾರಂಭಿಸಿದ್ದವು. ವರುಣ್ ಗಾಂಧಿಯ ಎಡವಟ್ಟು ಹೇಳಿಕೆಯನ್ನು ಸಮರ್ಥಿಸಿದ್ದು ಭಾಜಪದ ಖಾಯಂ ಮತದಾರನನ್ನೂ ಮತ್ತೊಮ್ಮೆ ಯೋಚಿಸುವಂತೆ ಮಾಡಿದಂತೆ ಕಾಣುತ್ತದೆ. ’ಭಯೋತ್ಪಾದನೆ’ ಯ ಕುರಿತಾದ ಬೊಬ್ಬೆಯೂ ಓಟುಗಳಾಗಿ ಪರಿವರ್ತನೆಯಾಗಲಿಲ್ಲ. ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ರಂತಹ ಪ್ರಚಂಡ ಮೇಧಾವಿಗಳು ರಚಿಸಿದ ವ್ಯೂಹಗಳೂ ಪರಿಣಾಮಕಾರಿಯಾಗಲಿಲ್ಲ. ರಾಜಸ್ಥಾನ, ಮಧ್ಯಪ್ರದೇಶ, ಓರಿಸ್ಸಾಗಳಲ್ಲಿ ಭಾಜಪ ಅನಿರೀಕ್ಷಿತವಾದ ಮತ್ತು ಬಲವಾದ ಪೆಟ್ಟು ತಿಂದಿದೆ. ಸರಿಹೊತ್ತಿನಲ್ಲಿ ಜೇಟ್ಲಿ ಮತ್ತು ಪಕ್ಷಾಧ್ಯಕ್ಷ ರಾಜನಾಥರ ನಡುವಿನ ಕಲಹವೂ ಭಾಜಪದ ವಿರುದ್ಧ ಕೆಲಸಮಾಡಿದೆ. ಹಾಗಾಗಿ ಸದರಿ ಚುನಾವಣೆಯಿಂದ ಭಾಜಪ ಕಲಿಯುವುದು ಬಹಳಷ್ಟಿದೆ. ಒಂದು ಪಕ್ಷವಾಗಿ ಅದರ ಸಾಧನೆ ನಗಣ್ಯವಲ್ಲದಿದ್ದರೂ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭಾಜಪದ ಸ್ಥಿತಿ ಇನ್ನೂ ಸಂಕೀರ್ಣವಾಗುತ್ತಾ ಹೋಗುತ್ತದೆ. ಈ ಬಾರಿ ಕಾಲೆಳೆಯುವವರ ಕಾಟವಿಲ್ಲದ ಕಾರಣ ಯುಪಿಯೆ ಒಳ್ಳೆಯ ಆಡಳಿತ ಕೊಡುವ ಸಾಧ್ಯತೆಗಳಿವೆ. ದೇಶದ ಭದ್ರತೆಯ ವಿಷಯವನ್ನು ಎಂದಿನಂತೆ ಅಲಕ್ಷಿಸಲಾರರೆಂದು ಆಶಿಸೋಣ. ಈಗಾಗಲೇ ‘ಯೂತ್’ ಮಂತ್ರ ಪ್ರಾರಂಭಿಸಿರುವ ಕಾಂಗ್ರೆಸ್ ತನ್ನ ಯುವ ಪಡೆಯನ್ನು ಕ್ರಮೇಣ ಇನ್ನಷ್ಟು ಬಲಿಷ್ಟಗೊಳಿಸಲಿದೆ. ರಾಹುಲ್ ಗಾಂಧಿ ದಿನದಿಂದ ದಿನಕ್ಕೆ ಪ್ರಬುದ್ಧರಾಗುತ್ತಿದ್ದಾರೆ.ಅಥವಾ ಹಾಗೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.(ಕೆಲಸ ಮಾಡುತ್ತಾರೋ ಕಾದು ನೋಡಬೇಕು). ಸಂಪುಟದಲ್ಲಿ ಮಾಧ್ಯಮಗಳಿಗೆ ನಿರಂತರ ಸಂಪರ್ಕವಿರುವ ಸಚಿವ ಸ್ಥಾನವೊಂದನ್ನು ಅವರಿಗೆ ಕೊಡಮಾಡಲಾಗುತ್ತದೆ. ಒಂದೆರಡು ವರ್ಷಗಳಲ್ಲೇ ಅರೋಗ್ಯದ್ದೋ, ವಯಸ್ಸಿನದೋ ಕಾರಣ ಹೇಳಿ ಮನಮೋಹನ್ ಸಿಂಗ್ ನೇಪಥ್ಯಕ್ಕೆ ಸರಿದು ರಾಹುಲ್ ಗಾಂಧಿ ಪ್ರಧಾನಿಯಾದರೆ ಆಶ್ಚರ್ಯವೇನಿಲ್ಲ. ಮತ್ತೊಮ್ಮೆ ನೆಹರು ಕುಟುಂಬದ ನೇರ ಆಳ್ವಿಕೆಗೆ ನಾವು ಒಳಗಾಗಲಿದ್ದೇವೆ. 10, ಜನಪಥ ನಿವಾಸ ಮತ್ತೂ ಪ್ರಬಲವಾಗಲಿದೆ. ದೇಶವನ್ನು ಸಮರ್ಥವಾಗಿ ಮುನ್ನೆಡೆಸುವುದಾದರೆ ನಮಗೆ ಯಾರಾದರೇನು ಅಲ್ಲವೇ?
ಒಟ್ಟಿನಲ್ಲಿ, ಪುರಾತನ ಕಾಂಗ್ರಸ್ಸಿಗೆ ಪರ್ಯಾಯ ಪಕ್ಷವೊಂದನ್ನು ಗಟ್ಟಿಮಾಡುವ ಪ್ರಯತ್ನಕ್ಕೆ ಎಂದಿನಂತೆ ಹಿನ್ನಡೆಯಾಗಿದ್ದಂತೂ ನಿಜ. ಪರ್ಯಾಯವಾಗಬಹುದಾಗಿದ್ದ ಭಾಜಪ ತನ್ನದೇ ತಪ್ಪುಗಳಿಂದ ಪರ್ಯಾಯವಾಗಿ ಕಾಂಗ್ರೆಸ್ಸನ್ನು ಬೆಳೆಯಗೊಟ್ಟಿದ್ದು ವಿಪರ್ಯಾಸ. ಭಾಜಪದ ’ಥಿಂಕ್ ಟ್ಯಾಂಕ್” ನ ಮುಂದೆ ಅತ್ಯಂತ ಜಟಿಲವಾದ ಸವಾಲುಗಳಿವೆ.ಆಡ್ವಾಣಿ ನಂತರದ ಸಮರ್ಥ ನಾಯಕತ್ವದ ಪ್ರಶ್ನೆ ಬೃಹತ್ತಾಗಿದೆ. ಪಕ್ಷದಲ್ಲಿ ತರುಣರನ್ನು ಬೆಳೆಸಬೇಕಾಗಿದೆ, ತರಬೇತುಗೊಳಿಸಬೇಕಾಗಿದೆ. ಅದಕ್ಕೂ ಮುಖ್ಯವಾಗಿ, ಬ್ಲಾಗುಗಳಲ್ಲಿ, ಇಂಟರ್ ನೆಟ್ ಚರ್ಚೆಗಳಲ್ಲಿ, ಆಫೀಸುಗಳಲ್ಲಿ ಓತಪ್ರೋತವಾಗಿ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡಿ ದಣಿಯುವ ಮಾನಸಿಕ ಬಿಜೆಪಿಗಳನ್ನು ಹೇಗಾದರೂ ಮತಗಟ್ಟೆಗೆ ಕರೆತರಬೇಕಾಗಿದೆ. ಪಕ್ಷಕ್ಕೆ ಹೊಸರೂಪ ಕೊಟ್ಟು ಹೊಸ ಆದ್ಯತೆಗಳೊಂದಿಗೆ ಜನತೆಯ ಮುಂದೆ ಹೋಗಲು ಸಿದ್ಧಗೊಳಿಸುವುದಕ್ಕೆ ಅವರ ಬಳಿ ಇನ್ನು ಐದು ವರ್ಷಗಳ ದೀರ್ಘ ಅವಧಿಯಿದೆ. ಅಲ್ಲಿಯವರೆಗೆ (ಬಹುಶಃ) ಸಿಂಗ್ ಇಸ್ ಕಿಂಗ್ ಹೈ!
-ಚಿನ್ಮಯ ಭಟ್

No comments: