Saturday, October 11, 2008

ಗೊಂದಲವೆಂಬ ಗೊಂಡಾರಣ್ಯದಲ್ಲಿ...

ಯಾವ ಪಕ್ಷ, ಸಂಘಟನೆಗಳಿಗೂ ಸೇರಿರದ, ಸೆಕ್ಯುಲರ್, ಪೆಕ್ಯುಲಿಯರ್ ಇದ್ಯಾವುದೂ ಅಲ್ಲದ ಪ್ರಜೆ ಎಂಬುವನಿದ್ದಾನಲ್ಲ. ನನ್ನಂತವನು, ನಿಮ್ಮಂತವನು..ಇವನ ನಿಲುವೇನು ಇವತ್ತಿನ ದಿನಗಳಲ್ಲಿ? ಹೋದ ತಿಂಗಳು ಟೀವಿ ಧಾರವಾಹಿಗಳಿಗಿಂತ ಕರಾರುವಾಕ್ಕಾಗಿ ಬಾಂಬ್ ಸ್ಫೋಟಗಳಾದವು, ನೂರಾರು ಜನರು ಜೀವ ಕಳೆದುಕೊಂಡರು. ಚರ್ಚ್ ಗಳ ಮೇಲೆ ಧಾಳಿ ನಡೆದವು. ಓರಿಸ್ಸಾದಲ್ಲಿ ನನ್ ಒಬ್ಬರ ಮೇಲೆ ಅತ್ಯಾಚಾರದಂತಹ ಅಮಾನುಷ ಕೃತ್ಯಗಳಾದವು. ಇಂತ ಘಟನೆಗಳು ನೆಡೆದಾಗ ಟಿವಿ ಚಾನೆಲ್ಲುಗಳಿಗೆ, ಪತ್ರಿಕೆಗಳಿಗೆ, ರಾಜಕಾರಣಿಗಳಿಗೆ, ಧರ್ಮಕಾರಣಿಗಳಿಗೆ ಪೂರ್ಣಾವಧಿ ಕೆಲಸವಿರುತ್ತದೆ. ಬುದ್ಧಿಕಾರಣಿಗಳು ಇತ್ತೀಚಿನ ಸೇರ್ಪಡೆ. ನಮ್ಮದೇನಿದ್ದರೂ ಗೊಣಗಾಟ.
ರಕ್ತಸಿಕ್ತರನ್ನೂ ಬಿಡದೇ ಮೈಕಿನ ಕೋಲನ್ನು ಮೂತಿಗೆ ಹಿಡಿದುಬಿಡುವ ಸುದ್ಧಿ ಮಾಧ್ಯಮಗಳು ಘಟನೆಗಳನ್ನು ಇನ್ನೂಬೀಭತ್ಸವನ್ನಾಗಿ ಮಾಡಿಬಿಡುತ್ತವೆ. ಬುದ್ಧಿ ಜೀವಿಗಳು ಯಥಾಪ್ರಕಾರ ಶಾಂತಿಯ ಮಂತ್ರವನ್ನು ಪಠಿಸಿ ಸುಮ್ಮನಾಗುತ್ತಾರೆ. ಹೀಗಿರುವಾಗ ಶ್ರೀಸಾಮಾನ್ಯನ ನಿಲುವು ಏನೆಂಬುದು ಗೊತ್ತಾಗುವದೇ ಇಲ್ಲ. ಏಕೆಂದರೆ ಯಾರೂ ಅವನನ್ನು ಸಂದರ್ಶಿಸುವುದಿಲ್ಲ.
ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ಹಲವರಿಗೆ ತಮ್ಮ ನಿಲುವನ್ನು ಹೇಳಿಕೊಳ್ಳಲು ಅಡ್ಡಿ ಏನೆಂದರೆ ಬ್ರಾಂಡ್ ಆಗಿಬಿಡುವ ಭಯ. ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸಿದಿರೋ ನಿಮ್ಮನ್ನು ನೀವು ’ಬುದ್ಧಿಜೀವಿಗಳು’ ಎಂದು ಕರೆಸಿಕೊಳ್ಳುವ ಅಪಾಯವಿದೆ. ಹಿಂದುತ್ವದ ಹಿಂದೆ ಬಿದ್ದಿರೋ ನಿಮ್ಮನ್ನು ‘ಚೆಡ್ಡಿ ಜೀವಿಗಳು’ ಎಂದುಬಿಡುತ್ತಾರೆ. ಈಗಿನ ಹೊಸ ವ್ಯಾಖ್ಯಾನವೇನೆಂದರೆ. ಕೇವಲ ಹಿಂದೂಗಳ ಹಿತ ಕಾಯುವ ಸಮೂಹವನ್ನು ಕೋಮುವಾದಿಗಳೆಂದೂ, ಗಲಭೆಯಾದ ತಕ್ಷಣ ಗಡಬಡಿಸಿ ಎದ್ದು ಬುದ್ಧಿ ಹೇಳಲು ಬರುವವರನ್ನು ಬುದ್ಧಿವಾದಿಗಳೆಂದೂ, ಗಲಭೆಯಾಗಲಿ, ಬೇಕಾದ್ದಿರಲಿ ತಮಗೇನಾದರೂ ಸಿಗುತ್ತದೆಯೋ ಎಂದು ಸದಾ ಹೊಂಚು ಹಾಕಿ ಕುಳಿತಿರುವ ರಾಜಕಾರಣಿಗಳ ಸಮೂಹವನ್ನು ಅವಕಾಶವಾದಿಗಳೆಂದೂ ಕರೆಯಬಹುದಾಗಿದೆ
ಮೇಲೆ ಹೇಳಿದ ವಾದಿಗಳೆಲ್ಲ ಸೇರಿ ಸಾಮಾನ್ಯನಿಗೆ ಒಂದು ನಿಲುವನ್ನು ಸ್ಥಾಪಿಸಿಕೊಳ್ಳಲು ಸಾಧ್ಯವೇ ಆಗದ ಒಂದು ನಿರಂತರ ಗೊಂದಲದ ಸ್ಥಿತಿಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿವೆ. ಮಾಧ್ಯಮಗಳ ಪಾತ್ರವೂ ಬಹಳ ದೊಡ್ಡದು ಇದರಲ್ಲಿ. ನೋಡಿ, ನಮ್ಮಲ್ಲಿ ಎಲ್ಲವಕ್ಕೂ ಒಂದು ನಿರಾಕರಣವಿದೆ. ಮೊನ್ನೆ ದೆಹಲಿಯಲ್ಲಿ ಭಯೋತ್ಪಾದಕರು ಎನಿಸಿಕೊಂಡವರ ಪೊಲೀಸ್ ಎನ್ ಕೌಂಟರ್ ನೆಡೆಯಿತಲ್ಲ. ಒಬ್ಬ ಅತ್ಯಂತ ದಕ್ಷ ಅಧಿಕಾರಿಯೂ ಗುಂಡೇಟಿನಿಂದ ಸತ್ತರು. ಬದುಕುಳಿದ ಒಬ್ಬಿಬ್ಬರನ್ನು ಹಿಡಿದು ತಂದಿದ್ದು ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ಮರುದಿನವೇ ಇನ್ನೊಂದು ವರದಿ ಪ್ರಕಟವಾಗಿಬಿಡುತ್ತದೆ. ಪೊಲೀಸರು ಒತ್ತಡ ಹೆಚ್ಚಾದಾಗ ಕೆಲವು ಪಾಪದ ಸಾಬರ ಹುಡುಗರನ್ನು ಹಿಡಿದು ಮುಖಕ್ಕೆ ಕರಿಮುಸುಕು ತೊಡಿಸಿದ್ದಾರೆಂಬ ಆರೋಪವಿರುತ್ತದೆ. ಮಾನವ ಹಕ್ಕುಗಳ ಸದಸ್ಯರು ತಗಾದೆ ತೆಗೆಯುತ್ತಾರೆ. ನಮಗೂ ಇದ್ದಿರಬಹುದೇ ಎಂಬ ಆತಂಕ ಹುಟ್ಟಿಬಿಡುತ್ತದೆ. ದೂರದ ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾಲಬುಡದ ಕರಾವಳಿಯಲ್ಲಿಯೇ ಬಂಧನಗಳು ನಡೆದಾಗ, ಕಣ್ಣಿಗೆ ಕಾಣುವ ಮೀಸೆ ಇಲ್ಲದ ಗಡ್ಡಧಾರಿಗಳೆಲ್ಲ ಭಯೋತ್ಪಾದಕರಂತೆ ಕಂಡುಬಿಡುತ್ತಾರೆ. ಊರಿನ ತುದಿಗೆ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವ, ಸೈಕಲ್ ರಿಪೇರಿಯ ನಿರುಪದ್ರವಿ ಬಡ ಸಾಯ್ಬ ಭಟ್ಕಳಕ್ಕೆ ಹೋಗುವುದು ಹಾಗಿರಲಿ,ಭಟ್ಕಳ ಬೋರ್ಡ್ ಇರುವ ಬಸ್ಸಿನಿಂದ ಇಳಿದರೂ ಎಂಥೆಂತದೋ ಅನುಮಾನ ಹುಟ್ಟಿಬಿಟ್ಟಾಗ ನಮ್ಮ ಯೋಚನಾ ಕ್ರಮದ ಬಗ್ಗೆ ನಾಚಿಕೆಯಾಗಿಬಿಡುತ್ತದೆ. ಆದರೆ ಇವೆಲ್ಲ ನಮ್ಮ ಗೊಂದಲಗಳ ಫಲಗಳೆಂದೇ ನನ್ನ ಅನಿಸಿಕೆ.
ನಾನಾವತಿ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿದಾಗ ಪಾಪ, ಮೋದಿ ಮುಗ್ಧ ಇದೆಲ್ಲ ಕಾಂಗ್ರೆಸ್ಸಿಗರ ಪಿತೂರಿ ಎಂದು ಮರುಗಿದೆವು ನಾವು – ನನ್ನಂತವರು. ಬೆನ್ನಲ್ಲೇ ಬಂತಲ್ಲ ಮತ್ತೊಂದು ವರದಿ. ಮೋದಿ ನಾನವತಿಯನ್ನು ಹೊಂದಿಸಿಕೊಡಿದ್ದಾರೆಂದು ತೆಹಲ್ಕಾ ಹೇಳಿಕೊಂಡಿತು. ”ನಾನಾವತಿ ಹಮಾರಾ ಆದ್ಮಿ ಹೈ, ಹಮ್ ಉನ್ ಕೊ ಫಿಟ್ ಕರ್ಲೇಂಗೆ” ಎಂದು ಬಿಜೆಪಿಯ ಎಮ್ಮೆಲ್ಲೆಯೊಬ್ಬ ಹೇಳಿದ್ದು ನಮ್ಮ ಕ್ಯಾಮರಾದಲ್ಲಿದೆ ಎಂದಳು ತೆಹಲ್ಕಾ ಪತ್ರಕರ್ತೆ. ಹೇಳಿ ಯಾವುದು ಸತ್ಯ ಯಾವುದು ಸುಳ್ಳು.
ಇಂತಹ ನಿರಾಕರಣಗಳು ಹಿಂದೆ ಇರಲಿಲ್ಲವೆಂದಲ್ಲ. ಜಗತ್ತಿನ ಎಲ್ಲೆಡೆಯಲ್ಲೂ ಇವೆ. ಆದರೆ ಬಹು ಪ್ರಮುಖ ಘಟನೆಗಳಿಗೆ, ವ್ಯಕ್ತಿತ್ವಗಳಿಗೆ ಸಂಬಂಧಪಟ್ಟಂತೆ ನಿರಾಕರಣಗಳಿವೆ. ಹಿಟ್ಲರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದ ಇವುಗಳಲ್ಲಿ ಪ್ರಮುಖವಾದದ್ದು. ತಾಜ್ ಮಹಲ್ ಕಟ್ಟಿಸಿದ್ದು ಷಹಜಹಾನ್ ಅಲ್ಲವೇ ಅಲ್ಲ ಎಂಬ ವಾದವೂ ಈ ಗುಂಪಿಗೆ ಸೇರುತ್ತದೆ. ಈಗ ಹಾಗಿಲ್ಲ. ನಮ್ಮ ಸುತ್ತಲಿನ ಯಾವುದೇ ಕ್ಷುಲ್ಲಕ ಘಟನೆಗೂ ಒಂದು ನಿರಾಕರಣವುಂಟು. ಮತ್ತು ಇವೇ ನಮ್ಮನ್ನು ಸದಾ ಗೊಂದಲದಲ್ಲಿರುವಂತೆ ಮಾಡುತ್ತವೆ. ನಮಗೆ ತಿಳಿದಿರುವುದು ಸತ್ಯವೆಂದು ಭಾವಿಸಿ ಕುಳಿತುಕೊಳ್ಳುವ ಹಾಗಿಲ್ಲ.
ಮೊನ್ನೆ ಎನ್ ಡಿ ಟಿವಿಯಲ್ಲಿ, ಓರಿಸ್ಸಾದಲ್ಲಿ ನೆಡೆದ ಕ್ರೈಸ್ತರ ಮೇಲಿನ ದೌರ್ಜನ್ಯದ ಕುರಿತಾದ ಚರ್ಚೆಯೊಂದನ್ನು ವೀಕ್ಷಿಸುತ್ತಿದ್ದೆ. ಹಿಂದೂ ಜಾಗರಣ ವೇದಿಕೆಯ ಪ್ರತಿನಿಧಿಯೊಬ್ಬರು ಇಂತಹ ಘಟನೆಗಳ ಹಿಂದೆ ಮತಾಂತರದ ಪಾತ್ರ ಬಹಳ ದೊಡ್ಡದಿದೆ ಎಂಬುದನ್ನು ಮಂಡಿಸಿದರು. ಮಂಗಳೂರಿನ ಸುತ್ತಮುತ್ತ ಕ್ರೈಸ್ತ ಮತಾಂತರ ಹೇಗೆ ವ್ಯವಸ್ಥಿತವಾಗಿ ನೆಡೆಯುತ್ತಿದೆಯೆಂದು ವಿಶದವಾಗಿ ವಿವರಿಸಿದರು. ಕ್ರೈಸ್ತ ಪ್ರತಿನಿಧಿ ಅದಕ್ಕೆ ಉತ್ತರವಾಗಿ ಹೇಳಿದರು. “ನಾವು ಯಾರನ್ನು ಮತಾಂತರ ಮಾಡುತ್ತಿದ್ದೇವೆಂದು ಗಮನಿಸಿ, ನಿಮ್ಮ ಧರ್ಮ ಅವರನ್ನು ಸೂಕ್ತವಾಗಿ ನೆಡೆಸಿಕೊಂಡಿಲ್ಲ. ಅವರಿಗೆ ನಾವು ಬದುಕು ಕೊಡುತ್ತಿದ್ದೇವೆ.” ಎಂದರು. ಹಾಗೆಯೇ ಮುಂದುವರಿದು, “ಅದಿರಲಿ, ನಮ್ಮಲ್ಲಿ ಅದಕ್ಕೆ ಅವಕಾಶವಾದರೂ ಇದೆ, ನನ್ನನ್ನು ನೀವು ಹಿಂದೂ ಧರ್ಮಕ್ಕೆ ಮತಾಂತರಿಸಿಕೊಳ್ಳುತ್ತೀರೋ?“ ಎಂದು ಪ್ರಶ್ನಿಸಿದರು.
“ಅವಶ್ಯ ಬನ್ನಿ, ನಿಮಗೆ ಸ್ವಾಗತ” ಎಂದರು ಇವರು.
ಅವರ ತತ್ತಕ್ಷಣದ ಪ್ರಶ್ನೆಯೇನು ಗೊತ್ತೇ? “ನನ್ನನ್ನು ನೇರವಾಗಿ ಬ್ರಾಹ್ಮಣನನ್ನಾಗಿ ಮಾಡಿಕೊಳ್ಳುತ್ತೀರೋ?”
“ನೀವು ನಿಮಗೆ ಬೇಕಾದ ಜಾತಿಯನ್ನು ಆಯ್ದುಕೊಳ್ಳಬಹುದು” ಎಂದರು ಜಾಗರಣ ವೇದಿಕೆಯವರು.
ನನಗೆ ಇಲ್ಲಿ ಎರಡು ಸಂಗತಿಗಳು ಕಾಣುತ್ತವೆ. ಪ್ರಶ್ನಿಸುವ ಅವರಿಗೂ, ಉತ್ತರಿಸುವ ಇವರಿಗೂ ಮತ್ತು ನಮಗೂ ಗೊತ್ತು. ಮೇಲಿನ ಹೇಳಿಕೆಗಳು ಎಂದಿಗೂ ಕಾರ್ಯ ರೂಪಕ್ಕೆ ಬರಲಾರವು. ಈ ಪ್ರಶ್ನೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಬುಡಕ್ಕೆ ನಮ್ಮನ್ನು ಕೊಂಡೊಯ್ದು ನಿಲ್ಲಿಸುತ್ತದೆ. ಮತ್ತು ಮುಂದದು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಜಾತಿ ಬೇರುಗಳು ಎಷ್ಟು ಆಳಕ್ಕೆ ಇಳಿದುಬಿಟ್ಟಿವೆಯೆಂದರೆ, ಕ್ರೈಸ್ತರ ಆಮಿಷಗಳಿಗೆ ಒಲಿದು ಹಿಂದೂ ಸಮೂಹದ ಎಲ್ಲ ಜಾತಿಗಳಿಂದ ಒಂದಿಷ್ಟು ಮತಾಂತರವಾಗಿಬಿಟ್ಟಿದ್ದರೆ ಕಾಲಕ್ರಮೇಣ ಬ್ರಾಹ್ಮಣ ಕ್ರೈಸ್ತರು, ವಕ್ಕಲಿಗ ಕ್ರೈಸ್ತರು, ಕುರುಬ ಕ್ರೈಸ್ತರು ಇತ್ಯಾದಿಗಳೆಲ್ಲ ಹುಟ್ಟಿಕೊಂಡಿರುತ್ತಿದ್ದವು.

ಎರಡನೆಯದು, ಹಿಂದೂಗಳಲ್ಲಿ ಕೆಳ ಜಾತಿಯವರ ಬದುಕು ದುಸ್ತರವೆಂಬುದು ಎಷ್ಟು ನಿಜವೋ, ಕ್ರೈಸ್ತ ಧರ್ಮ ಮತಾಂತರಗೊಂಡವರ ಬದುಕನ್ನು ಹಸನಾಗಿಸುತ್ತದೆ ಎಂಬುದು ಒಂದು ಭ್ರಮೆಯೇ. ಕ್ರೈಸ್ತ ಧರ್ಮ ಮತಾಂತರಗೊಂಡವರಿಗೆ ಒಂದು ಅನನ್ಯತೆಯ ಗೌರವವನ್ನು ತಂದು ಕೊಡುತ್ತದೆ ಎಂದು ಅನಂತ ಮೂರ್ತಿಗಳು ಯಾವ ಅರ್ಥದಲ್ಲಿ ಹೇಳಿದರೋ ತಿಳಿಯೆ.

ನಿರಾಕರಣದ ಬಗ್ಗೆ ಹೇಳುವಾಗ ಸಮರ್ಥನೆಯ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ.
ಮುಸ್ಲಿಂ ಜಗತ್ತಿಗೆ ಅದರದ್ದೇ ಆದ ಸಮರ್ಥನೆ ಇರುತ್ತದೆ. ನಮ್ಮನ್ನು ಮುಖ್ಯವಾಹಿನಿಯಲ್ಲಿ ಯಾವತ್ತೂ ಪರಿಗಣಿಸಲಿಲ್ಲ. ನಿಮ್ಮ ಕಾಲನಿಗಳಲ್ಲಿ ನಮಗೆ ಮನೆ ಕೊಡಲಾರಿರಿ, ನಿಮ್ಮ ಕಂಪನಿಗಳಲ್ಲಿ ಕೆಲಸ ಕೊಡಲಾರಿರಿ. ಗುಜರಾತಿನಲ್ಲಾದ ಮುಸ್ಲಿಮರ ಕಗ್ಗೊಲೆಯಿಂದ ನೊಂದ ಕೆಲವರು ಭಯೋತ್ಪಾದಕರಾಗಿರಬಹುದು. ಇತ್ಯಾದಿ..ಇತ್ಯಾದಿ.
ನೀವು ದಿನ ಬೆಳಗಾದರೆ ಸಿಕ್ಕ ಸಿಕ್ಕಲ್ಲಿ ಬಾಂಬ್ ಸ್ಫೋಟಿಸುತ್ತಿದ್ದರೆ ನಿಮ್ಮನ್ನು ಹತ್ತಿರ ಸೇರಿಸುವುದಾದರೂ ಹೇಗೆ? ಎಂಬುದು ಇನ್ನೊಂದು ಸಮೂಹದ ವಾದ. ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪ್ರಶ್ನೆಯಷ್ಟೇ ಗೊಂದಲಕಾರಿಯಾದದ್ದು ಇದು.
ಎತ್ತ ಸಾಗುತ್ತಿದ್ದೇವೆ ನಾವು?
-ಚಿನ್ಮಯ.

1 comment:

Papu said...

Good Article. Keep it up Chin