Sunday, October 5, 2008

ಟಾಟಾ ನ್ಯಾನೊ ಮತ್ತು ನಮ್ಮ ವಿಜ್ಞಾನ, ತಂತ್ರಜ್ಞಾನ

“ಶಾಂತಿಯ ಬಗ್ಗೆ ಚರ್ಚಿಸುವಾಗ ಗಾಂಧಿ ಎಂಬ ಹೆಸರನ್ನು ಉಪೇಕ್ಷಿಸಿದಿರಾದರೆ ಅದು ನಿಮ್ಮ ಸ್ವಂತ ರಿಸ್ಕು” ಹೀಗೆ ಹೇಳಿದವರು ಖ್ಯಾತ ಸಮಾಜ ಸುಧಾರಕ ಮಾರ್ಟಿನ್ ಲೂಥರ್ ಕಿಂಗ್.
ಟಾಟಾ ಕುರಿತು ಇಂತಹುದೇ ಒಂದು ಪ್ರಮೇಯ ಈಗ ಜಾಗತಿಕ ಮಟ್ಟದ ಕಾರು ತಯಾರಿಕರಿಗೆ ಮತ್ತು ಪೂರೈಕೆದಾರ ಸಂಸ್ಥೆಗಳಿಗೆ ಒದಗಿಬಂದಿದೆ. ಈಗ ಇವರ್ಯಾರೂ ಟಾಟಾ ಸಂಸ್ಥೆಯನ್ನು ಉಪೇಕ್ಷಿಸುವಂತಿಲ್ಲ. ಉಪೇಕ್ಷಿಸಿದರೆ ಅವರಿಗೇ ಹಾನಿ. ಕಾರು ತಯಾರಿಕರಿಗೆ ಟಾಟಾ ಒಂದು ಸವಾಲಾದರೆ, ಪೂರೈಕೆದಾರರಿಗೆ (ಸಪ್ಲಾಯರ್ಸ್) ಟಾಟಾ ಹೊಸ ಆಶಾಕಿರಣ. ತಮ್ಮದೇ ಪ್ರತಿಷ್ಟಿತ ಕಂಪನಿಗಳನ್ನು ಕಬಳಿಸುತ್ತಿರುವ ಟಾಟಾ ಬ್ರಿಟಿಷರಿಗೆ ಈಸ್ಟ್ ಇಂಡಿಯಾ ಕಂಪನಿಯೇ ಹೊಸ ಅಂಗಿ ತೊಟ್ಟು ಬಂದಂತೆ ಗೋಚರಿಸುತ್ತಿದೆ.
ರತನ್ ರ ಕನಸು ನ್ಯಾನೋ ದತ್ತ ಇಡೀ ಜಗತ್ತೇ ಭರವಸೆಯ ಕಣ್ಣುಗಳಿಂದ ನೋಡುತ್ತಿರುವಾಗ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದ ಕಣ್ಣುಗಳಲ್ಲಿ ಆಸೆಯನ್ನೂ ಹೊರಹೊಮ್ಮಿಸಿದೆ. ಸ್ವಯಂವರದಲ್ಲಿ ರತನ್ ಟಾಟಾ ಎಂಬ ಬ್ರಹ್ಮಚಾರಿಯ ಕುವರಿ ನ್ಯಾನೋ ಯಾರನ್ನು ವರಿಸುತ್ತಾಳೆಂಬುದನ್ನು ಕಾದು ನೋಡಬೇಕಾಗಿದೆ. ಕರ್ನಾಟಕ ಮತ್ತು ಆಂಧ್ರ ನಾನೋ ನೀನೋ ಎಂದು ಪೈಪೋಟಿಗೆ ಬಿದ್ದಿವೆ.
ಸುದ್ಧಿವಾಹಿನಿಗಳಲ್ಲಿ ಸದರಿ ಮಾಹಿತಿ ಪ್ರಸಾರವಾದಾಗ ಎಲ್ಲ ಕನ್ನಡಿಗರಂತೆ ನನಗೂ ಸಂತಸವಾಯಿತು. ಅದರಲ್ಲೂ ಧಾರವಾಡದಲ್ಲಿ ಇಂತಹ ಕೈಗಾರಿಕೆಯೊಂದು ಸ್ಥಾಪನೆಯಾಗುತ್ತದೆಯೆಂದರೆ ಬಹಳ ಖುಶಿಯ ಸಂಗತಿ. ಬಹುಕಾಲದಿಂದ ಅಲಕ್ಷಕ್ಕೊಳಗಾಗಿದ್ದ ಉತ್ತರ ಕರ್ನಾಟಕಕ್ಕೆ ಇದೊಂದು ಬಂಪರ್ ಅವಕಾಶವಾಗುವುದರಲ್ಲಿ ಸಂಶಯವಿಲ್ಲ. ಕರ್ನಾಟಕದಲ್ಲಿ ಬೃಹತ್ ಕೈಗಾರಿಕಾ ವಿಕೇಂದ್ರಿಕರಣದ ಮೊದಲ ಹೆಜ್ಜೆಯಾಗಲಿದೆ ಇದು.
ನ್ಯಾನೋಕರ್ನಾಟಕಕ್ಕೆ ಬಂತೆಂದು ಭಾವಿಸೋಣ. (ಇನ್ನೂ ದೇವೆಗೌಡರ ಅಸ್ತ್ರ ಹೊರಬಿದ್ದಿಲ್ಲ. ಅದನ್ನು ದೇವರು ಮಾತ್ರ ಬಲ್ಲ.) ಇದರ ಮೊಟ್ಟ ಮೊದಲ ಫಲಾನುಭವಿಗಳು ರಿಯಲ್ ಎಸ್ಟೇಟ್ ಮಂದಿ. ಇವರಿಗೆ ಮಾಹಿತಿಗಳು ಖಚಿತವಾಗಿರಬೇಕೆಂಬುದೇನಿಲ್ಲ. ವದಂತಿಗಳಿದ್ದರೂ ಸಾಕು. ಇವರು ಆಜನ್ಮ ಪರಾವಲಂಬಿ ಜೀವಿಗಳು. ಅಭಿವ್ರದ್ಧಿ ಸರಕಾರದಿಂದಾಗಲಿ, ಸಂಘ ಸಂಸ್ಥೆಗಳಿಂದಾಗಲಿ, ಅವುಗಳನ್ನೆಲ್ಲ ಜನಕ್ಕೆ ತೋರಿಸಿ ತಮ್ಮ ಅಭಿವೃದ್ಧಿ ಮಾಡಿಕೊಂಬವರು ಇವರು. ಈಗಾಗಲೇ ಧಾರವಾಡದ ಸುತ್ತಮುತ್ತ ಬೆಟ್ಟ ಬಯಲುಗಳೆಲ್ಲ ಭಯಂಕರ ಬೆಲೆ ಪಡೆದುಕೊಂಡಿರಬಹುದು. ಸರಕಾರ ಪ್ರಾರಂಭದಲ್ಲಿಯೇ ಇಂತಹ ಬೆಳವಣಿಗೆಗಳನ್ನು ನಿಯಂತ್ರಿಸಬೇಕಾಗಿದೆ. ನಿವೇಶನಗಳನ್ನು ಮಾರಾಟಕ್ಕೆಂದೇ ಖರೀದಿಸುವವರನ್ನು ಹೇಗಾದರೂ ತಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಧಾರವಾಡದಲ್ಲಿ ಮಿನಿ ಬೆಂಗಳೂರು ಉದಯಿಸಲಿದೆ. ಸಾಮನ್ಯ ಅಂಗಡಿಕಾರರಿಗೆ, ಶಾಲಾ ಮಾಸ್ತರರಿಗೆ, ಮತ್ತು ಇನ್ನಿತರ ಸಣ್ಣ ಪಗಾರದ ಜನರಿಗೆ ಧಾರವಾಡ ತುಟ್ಟಿಯಾಗುವ ಕಾಲ ದೂರವಿಲ್ಲ.
ಮತ್ತೊಂದು ಪ್ರಮುಖ ವಿಷಯವೆಂದರೆ ಉದ್ಯೋಗಾವಕಾಶಗಳು. ಸರಕಾರ ನ್ಯಾನೊದಂತಹ ದೊಡ್ಡ ಉದ್ದಿಮೆಗಳನ್ನು ರಾಜ್ಯಕ್ಕೆ ತರುವಾಗ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆಯ ಕರಾರನ್ನು ಅಳವಡಿಸುವದಕ್ಕೆ ಪ್ರಯತ್ನಿಸಬೇಕು. ಕಸಗುಡಿಸುವವರು ಮತ್ತು ಇತರೇ ಕೆಳಮಟ್ಟದ ಕೆಲಸಗಳಿಗೆ ನಮ್ಮವರು ಮತ್ತು ಅಧಿಕಾರಿ ವರ್ಗ ಮಹಾರಾಷ್ಟದವರು, ಬಂಗಾಳದವರಾದರೆ ಹೆಚ್ಚಿನ ಪ್ರಯೋಜನವಿಲ್ಲ. ಇದು ಭಾಷಾಭಿಮಾನದ ಪರಿಧಿಯನ್ನು ಮೀರಿದ್ದು. ಆದರೆ ಒಂದು ಭೂಭಾಗದ ಜನರ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ. ಧಾರವಾಡದಲ್ಲಿನ ಉದ್ದಿಮೆಯೊಂದರಲ್ಲಿ ದೂರದ ಮಹಾರಾಷ್ಟ್ರದ ಜನತೆ ಬಹು ಸಂಖ್ಯೆಯಲ್ಲಿ ಉದ್ಯೋಗ ಪಡೆದರೆ ಅದು ಸಹಜವಾಗಿ ಸ್ಥಳೀಕರ ಅಸಹನೆಗೆ ಕಾರಣವಾಗುತ್ತದೆ. ಹಾಗೆ ಕೆಲಸ ಮಾಡುವ ಮರಾಠಿಗರು ನಮಗೂ ಮಹಾರಾಷ್ಟ್ರಕ್ಕೂ ಎಂದಿಗೂ ಸೇತುವೆಯಾಗಲಾರರು.
ಹೀಗೆ ಹೇಳುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸ್ಥಳೀಯತೆಯೆಂಬುದೇ ನಮ್ಮ ಪ್ರತಿಭೆ ಮತ್ತು ಅರ್ಹತೆಯಾಗಬಾರದು. ಉದ್ದಿಮೆಗಳು ನಿರ್ದಿಷ್ಟ ಪರಿಣಿತರನ್ನು ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಹೋಗದಂತೆ ಮಾಡಬೇಕಾಗಿದೆ. ಆದರೆ ಅದು ಸಾಕಾರವಾಗುವುದು ಹೇಗೆ? ಇಲ್ಲಿ ಸರಕಾರ, ಕೈಗಾರಿಕೋದ್ಯಮಿಗಳು, ಮತ್ತು ಜನರು ಸಮಾನ ಜವಾಬ್ದಾರರಾಗುತ್ತಾರೆ. ಉದಾಹರಣೆಗೆ, ಧಾರವಾಡದಲ್ಲಿ ನ್ಯಾನೊ ಸ್ಥಾಪನೆಯ ಜೊತೆಯಲ್ಲೇ ಟಾಟಾ ಸ್ಥಳೀಯ ವಿಶ್ವವಿದ್ಯಾಲಯಗಳಲ್ಲಿ ಸರಕಾರದ ಸಹಕಾರದೊಂದಿಗೆ ಸಂಶೋಧನಾ ಘಟಕಗಳನ್ನು ಪ್ರಾರಂಭಿಸಬೇಕು. Automotive manufacturing, Automotive design, Lean manufacturing ಇತ್ಯಾದಿ ಕೋರ್ಸುಗಳನ್ನು ಪ್ರಾರಂಭಿಸಬೇಕು. ಮತ್ತು ಈ ಕೋರ್ಸುಗಳ ಸಿಂಹಪಾಲು ರಾಜ್ಯದ ಜನತೆಗೇ ದಕ್ಕುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ, ವಿದ್ಯಾರ್ಥಿಗಳು ನಿರಂತರ ಮ್ಯಾನುಫಾಕ್ಚರಿಂಗ್ ಪರಿಸರದಲ್ಲಿ ಬೆಳೆಯುವುದರಿಂದ ಹೆಚ್ಚಿನ ಆವಿಷ್ಕಾರಗಳನ್ನು ನಿರೀಕ್ಷಿಸಬಹುದು. ಮೂಲತ: ನಮ್ಮಲ್ಲಿ ಅಪ್ಲೈಡ್ ಸೈನ್ಸ್ ನ ಕೊರತೆ ಇದೆ. “ಭಾರತೀಯರಲ್ಲಿ ತಂತ್ರಜ್ಞಾನವೆಂಬುದು ಇನ್ನೂ ಕೈ ಬೆರಳುಗಳಿಗೆ ರವಾನೆಯಾಗಿಲ್ಲ” ಎಂಬ ಹಿರಿಯ ಕೈಗಾರಿಕಾ ಬರಹಗಾರರೊಬ್ಬರ (ಅವರ ಹೆಸರು ಗುರುಚರಣ್ ದಾಸ್ ಇರಬೇಕು) ಮಾತು ಬಹಳ ಸತ್ಯವೆನ್ನಿಸುತ್ತದೆ.
ನಾನು ಬ್ರಿಟಿಷರ ನಾಡಿನಲ್ಲಿ ಕಾರು ತಯಾರಿಕೆಗೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಡಿಸೈನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪರ್ಚೇಸ್ ವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ನನಗಿಂತ ಉತ್ತಮವಾಗಿ, ಸಮರ್ಥವಾಗಿ ಕಾರಿನ ವಿನ್ಯಾಸದ ಬಗ್ಗೆ, ಇತರೇ ಟೆಕ್ನಿಕ್ ಗಳ ಬಗ್ಗೆ ಮಾತನಾಡಬಲ್ಲ. ಇವರು ಕಳೆದ ಶತಮಾನದ ಆದಿಯಿಂದ ಕಾರು ಬಳಸುತ್ತಿರುವವರು ಎಂಬುದು ನಿಜವಿದ್ದರೂ ನನ್ನ(ಮ್ಮ) ಅಜ್ಞಾನಕ್ಕೆ ಅದು ಸಮರ್ಥೆನೆಯಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಇವರುಗಳ ಬದುಕಿನಲ್ಲಿ ಹೇಗೆ ಹಾಸು ಹೊಕ್ಕಾಗಿದೆ ಎಂಬುದಷ್ಟೇ ನನಗೆ ಮುಖ್ಯವಾಗಿ ಕಾಣುತ್ತಿರುವುದು. ಇಲ್ಲಿ ನನ್ನ ಮಿತ್ರನೊಬ್ಬನ ಅನುಭವವನ್ನು ದಾಖಲಿಸುವುದು ಉಚಿತವೆನಿಸುತ್ತದೆ. ಆತ ಬೆಂಗಳೂರಿನಲ್ಲಿ ಅಮೇರಿಕನ್ ಮೂಲದ ಕಾರು ತಯಾರಿಕಾ ಸಂಸ್ಥೆಯ ಡಿಸೈನ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾನೆ. ಒಮ್ಮೆ ಆತನನ್ನು ಅಮೆರಿಕಾದ ಕೇಂದ್ರ ಸಂಸ್ಥೆಗೆ ಚರ್ಚೆಯೊಂದಕ್ಕೆ ಆಹ್ವಾನಿಸಲಾಯಿತು. “ಕಳೆದ ವರ್ಷದಿಂದ ಈ ವರ್ಷಕ್ಕೆ ನಿಮ್ಮ ಕೆಲಸದಲ್ಲಿ ಏನು ಪ್ರಗತಿ ಸಾಧಿಸಿದ್ದೀರೆಂದು ಹೇಳಬಲ್ಲಿರಿ?” ಎಂದು ಹಿರಿಯ ಉದ್ಯೋಗಿಯೊಬ್ಬರು ಅನೌಪಚಾರಿಕವಾಗಿ ಈತನನ್ನು ಕೇಳಿದರು.
“ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅರ್ಥಪೂರ್ಣವಾದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ” ಎಂದ ಮಿತ್ರ.
ಸ್ವಲ್ಪ ವಿವರಿಸಿ ನಿಮ್ಮ ಮಾತನ್ನು ಎಂದರು ಅವರು.
“ನಮ್ಮ ಬೆಂಗಳೂರಿನ ವಿಭಾಗದಲ್ಲಿ ಕೆಲಸ ಮಾಡುವ ಒಟ್ಟೂ ಆರು ಸಾವಿರ ಉದ್ಯೋಗಿಗಳಲ್ಲಿ ಶೇಕಡಾ ಹತ್ತು ಜನರ ಬಳಿಯೂ ಕಾರು ಎಂಬ ಪದಾರ್ಥವಿಲ್ಲ. ಆದರೆ ದಿನ ನಿತ್ಯ ನಾವುಗಳು ಕಾರಿನ ವಿವಿಧ ಭಾಗಗಳ ಡಿಸೈನ್ ಮತ್ತು ಡೆವೆಲಪ್ ಮೆಂಟ್ ಕಾರ್ಯದಲ್ಲಿ ಮುಳುಗಿದ್ದೇವೆ. ಕಾರಿನ HVAC ಭಾಗದ ಡಿಸೈನ್ ಮಾಡುತ್ತಿರುವ ಉದ್ಯೋಗಿಯು ಜನ್ಮದಲ್ಲಿ ಆ ವಸ್ತುವನ್ನು ನೋಡಿರುವುದಿಲ್ಲ. ಕೇವಲ ಪುಸ್ತಕ ಜ್ಞಾನ ಮತ್ತು ಡಿಜಿಟಲ್ ಮಾಡೆಲ್ ಗಳಷ್ಟೇ ಆತನ ಆಧಾರ. ಕನಿಷ್ಟ ಪಕ್ಷ ಕಾರೊಂದನ್ನು ಅರ್ಧ ಸೀಳೊಂದನ್ನು (ಡಿಸೆಕ್ಷನ್) ನಮ್ಮಲ್ಲಿ ತಂದಿಟ್ಟರೆ ಅನುಕೂಲವಾಗುತ್ತದೆ. ಅದಿಲ್ಲದಿದ್ದರೆ ನಮ್ಮ ಕೆಲಸ ಕೇವಲ ಡಿಸೈನ್ ಪಡಿಚಾಕರಿಯಾಗುತ್ತದೆ. ಡಿಸೈನ್ ಎಂದು ಕರೆಸಿಕೊಳ್ಳುವುದಿಲ್ಲ”. ಎಂದು ವಿವರಿಸಿದ.
ಈ ಮೇಲಿನ ಹೇಳಿಕೆಗಳು ನಮ್ಮ ಅಕೆಡೆಮಿಕ್ ಶಿಕ್ಷಣದ ಸ್ವರೂಪದಲ್ಲಿ ಬದಲಾವಣೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ. ವಿದೇಶಿ ಕಂಪನಿಗಳು ಮೂಲ ಸಂಶೋಧನೆಯನ್ನು ತಮ್ಮಲ್ಲೇ ಇಟ್ಟುಕೊಂಡು ಅಗ್ಗದ ಮಾನವ ಸಂಪನ್ಮೂಲಗಳಾಗಿ ನಮ್ಮನ್ನು ಬಳಸಿಕೊಳ್ಳುತ್ತವೆ. ಟೊಯೊಟಾ ಸಂಸ್ಥೆ ತನ್ನ ಸಂಶೋಧನಾ ಘಟಕವನ್ನು ಜಪಾನಿನ ವಿಶ್ವವಿದ್ಯಾಲಯಗಳಲ್ಲಿ ತೆರೆಯುತ್ತದೆಯೇ ಹೊರತು ಭಾರತದಲ್ಲಲ್ಲ. ಭಾರತದಲ್ಲಿ ಇಂತಹ ಕೆಲಸಗಳು ಟಾಟಾ, ಬಜಾಜ್, ಮಹಿಂದ್ರಾ ದಂತಹ ಸಂಸ್ಥೆಗಳಿಂದ ಆಗಬೇಕಾಗಿದೆ. ಪ್ರಸ್ತುತದಲ್ಲಿ ನಾವು ತಂತ್ರಜ್ಞಾನದ ಬಳಕೆದಾರರಷ್ಟೇ ಆಗಿದ್ದೇವೆ. ಆದರೆ ಸೃಷ್ಟಿಕಾರರಾಗಿಲ್ಲ. ಹಾಗಾಗುವುದು ಸುಲಭದ ಮಾತಲ್ಲವೆಂಬುದು ಎಷ್ಟು ಸತ್ಯವೋ, ನಮ್ಮನ್ನು ಆಳುವವರ ಮತ್ತು ಉದ್ದಿಮೆದಾರರ ದೂರದೃಷ್ಟಿಯ ಕೊರತೆಯೂ ಇದಕ್ಕೆ ಕಾರಣ ಎಂಬುದು ಅಷ್ಟೇ ಸತ್ಯ.
ನ್ಯಾನೋ ಧಾರವಾಡಕ್ಕೆ ಬಂದೀತೆಂಬ ಆಸೆಯೊಂದಿಗೆ.

-ಚಿನ್ಮಯ.

7 comments:

Lakshmi Shashidhar Chaitanya said...

ತುಂಬಾ ಚೆನ್ನಾಗಿ ಬರ್ದಿದಿರ. ನಿಮ್ಮ ಮಾತು ನಿಜ. ಸಂಶೋಧನಾ ಕೇಂದ್ರಗಳು ತೆರೆಯಬೇಕಾಗಿರುವುದು ವಿಶ್ವವಿದ್ಯಾಲಯಗಳಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಯುತ್ತಿತ್ತು...ಅದಕ್ಕೆ ನೊಬೆಲ್ ಬಂತು ! ಈಗ...ಬಿಡಿ.

ನ್ಯಾನೋ ಧಾರವಾಡಕ್ಕೆ ಬಂದು, ಡಿಸೈನ್ ಇಂಜಿನೀರಿಂಗ್, ಮಟೀರಿಯಲ್ ಅನಲಿಸಿಸ್ ಇವೇ ಮುಂತಾದ ಕ್ಷೇತ್ರಗಳಲ್ಲಿ ಬೆಳವಣಿಗೆ ಆಗಲಿ ಅಂತ ಆಶಿಸುವೆ.

Anonymous said...

Kannadaba balake tumbaa chennagide..i am delighted to read this article.. more so it is written by my friend..

You have made sincere effort to bring out deep rooted thoughts in every kannadiga..

good luck and keep writing
Preethiyinda
Surya

ಚಿನ್ಮಯ said...

ಲಕ್ಷ್ಮಿಯವರೆ,
ಥ್ಯಾಂಕ್ಸ್ ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ.
ಆಯಿತು ಬಿಡಿ ಆಗಲೇ ನ್ಯಾನೊ ಮೋದಿಯ ಸ್ವತ್ತಾಯಿತು.
-ಚಿನ್ಮಯ

ಚಿನ್ಮಯ said...

Thanks very much Surya

nishu mane said...

Interesting lekhana. chennaagi baredideeri chinmaya. eeginnoo nimma blog parichaya aaytu. ella postgalannoo matte bandu oduttene.heege bareetiri.
-Meera.

ವಿ.ರಾ.ಹೆ. said...

ನಮಸ್ತೆ, ಮೊದಲ ಭೇಟಿಗೆ ಬ್ಲಾಗ್ ಚೆನ್ನಾಗಿ ಓದಿಸಿಕೊಂಡು ಹೋಯಿತು. thanx

ನಿಮ್ಮ ಅಭಿಪ್ರಾಯಗಳು ಅಕ್ಷರಶಃ ನಿಜ.

Anonymous said...

Dear Mr.Chinmay,
Unlike many other blogs that I read, yours is definitely on an altogether different intellectual level. ವಿದೇಶಿ ಕಂಪನಿಗಳು ಮೂಲ ಸಂಶೋಧನೆಯನ್ನು ತಮ್ಮಲ್ಲೇ ಇಟ್ಟುಕೊಂಡು ಅಗ್ಗದ ಮಾನವ ಸಂಪನ್ಮೂಲಗಳಾಗಿ ನಮ್ಮನ್ನು ಬಳಸಿಕೊಳ್ಳುತ್ತವೆ. ಟೊಯೊಟಾ ಸಂಸ್ಥೆ ತನ್ನ ಸಂಶೋಧನಾ ಘಟಕವನ್ನು ಜಪಾನಿನ ವಿಶ್ವವಿದ್ಯಾಲಯಗಳಲ್ಲಿ ತೆರೆಯುತ್ತದೆಯೇ ಹೊರತು ಭಾರತದಲ್ಲಲ್ಲ. ಭಾರತದಲ್ಲಿ ಇಂತಹ ಕೆಲಸಗಳು ಟಾಟಾ, ಬಜಾಜ್, ಮಹಿಂದ್ರಾ ದಂತಹ ಸಂಸ್ಥೆಗಳಿಂದ ಆಗಬೇಕಾಗಿದೆ. - For instance, this is pretty thought provoking and definitely worth contemplating.

Regards
D.M.Sagar